
ನವದೆಹಲಿ: ಮುಂದಿನ ತಿಂಗಳ ನಡೆಯುವ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಸೂತ್ರಕ್ಕೆ ಸಂಬಂಧಿಸಿದಂತೆ ಬಿಹಾರ ಮಹಾಘಟಬಂಧನ್(ಮಹಾಮೈತ್ರಿಕೂಟ)ದಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಒಕ್ಕೂಟದ ಅತಿದೊಡ್ಡ ಪಕ್ಷವಾದ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನೀಡಿದ ಆಫರ್ ಅನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಲಿಬರೇಶನ್ ತಿರಸ್ಕರಿಸಿದೆ.
ಎಡ ಪಕ್ಷಕ್ಕೆ 19 ಸ್ಥಾನಗಳನ್ನು ನೀಡಲಾಗಿತ್ತು ಎಂದು ವರದಿಯಾಗಿದೆ. 2020ರ ವಿಧಾನಸಭಾ ಚುನಾವಣೆಯಲ್ಲೂ 19 ಸೀಟ್ ನೀಡಲಾಗಿತ್ತು. ಆದಾಗ್ಯೂ, ಸಿಪಿಐ-ಎಂಎಲ್ (ಲಿಬರೇಶನ್) ಕಳೆದ ಬಾರಿ ಸ್ಪರ್ಧಿಸಿದ್ದ ಹಲವಾರು ಕ್ಷೇತ್ರಗಳ ವಿನಿಮಯ ಮತ್ತು ಸ್ಥಾನಗಳ ಸಂಖ್ಯೆ ಎರಡಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ.
ಪಕ್ಷವು ಈಗಾಗಲೇ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ, 30 ಆದ್ಯತೆಯ ಕ್ಷೇತ್ರಗಳ ಪಟ್ಟಿಯನ್ನು ಸಲ್ಲಿಸಿದೆ ಮತ್ತು ಅಧಿಕೃತವಾಗಿ ಸೀಟು ಹಂಚಿಕೆಗೆ ಕಾಯುತ್ತಿದೆ ಎಂದು ಸಿಪಿಐ-ಎಂಎಲ್(ಲಿಬರೇಶನ್) ಮೂಲಗಳು ತಿಳಿಸಿವೆ.
"ನಮ್ಮ ಪಕ್ಷವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಪಕ್ಷದ ಘನತೆಯೊಂದಿಗೆ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಿಪಿಐ-ಎಂಎಲ್(ಲಿಬರೇಷನ್) ಹೆಚ್ಚಿನ ಸ್ಥಾನಗಳನ್ನು ಬೇಡುತ್ತಿಲ್ಲ. ಆದರೆ ಮೈತ್ರಿಕೂಟದ ಗೆಲುವಿನ ಸಾಧ್ಯತೆಯನ್ನು ಸುಧಾರಿಸುತ್ತಿದೆ. ಮಧುಬನಿ, ಗಯಾ, ನಳಂದ, ಚಂಪಾರಣ್ ಮತ್ತು ಇತರ ಜಿಲ್ಲೆಗಳಂತಹ ಎನ್‌ಡಿಎ ಕೇಂದ್ರಬಿಂದುಗಳೆಂದು ಪರಿಗಣಿಸಲಾದ ಜಿಲ್ಲೆಗಳಲ್ಲಿ ನಾವು ಸ್ಥಾನಗಳನ್ನು ಹುಡುಕುತ್ತಿದ್ದೇವೆ. ಈಗ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಆರ್‌ಜೆಡಿಗೆ ಬಿಟ್ಟದ್ದು. ಅವರ ಪ್ರತಿಕ್ರಿಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ” ಎಂದು ನಾಯಕರೊಬ್ಬರು CPI-ML ಹೇಳಿದ್ದಾರೆ.
Advertisement