
ನವದೆಹಲಿ: ಸರ್ಕಾರದ ಹಳದಿ ಬಟಾಣಿ ಆಮದು ನೀತಿಯು ಅದಾನಿ ಗ್ರೂಪ್‌ಗೆ "ಗಣನೀಯ ಲಾಭ" ತಂದುಕೊಟ್ಟಿದೆ. ಆದರೆ ರೈತರು "ಭಾರಿ ನಷ್ಟ" ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
"ಆತ್ಮನಿರ್ಭರ ಭಾರತ" ಈಗ 'ಮೋದಾನಿ-ನಿರ್ಭರ ಭಾರತ" ಆಗಿದೆ ಎಂಬುದಕ್ಕೆ ಇದು ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2014 ರಿಂದ 25ರ ವರೆಗೆ ಭಾರತವು 67 ಲಕ್ಷ ಟನ್‌ಗಳಿಗಿಂತ ಹೆಚ್ಚು ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಂಡಿದೆ. ಅದರಲ್ಲಿ ಸರಿಸುಮಾರು 30 ಲಕ್ಷ ಟನ್ ಹಳದಿ ಬಟಾಣಿಯಾಗಿದ್ದು, ಇದನ್ನು ದ್ವಿದಳ ಧಾನ್ಯಗಳಿಗೆ ಪರ್ಯಾಯವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಹಳದಿ ಬಟಾಣಿಗಳ ಮೇಲೆ ಆಮದು ಸುಂಕವಿಲ್ಲದ ಕಾರಣ, ಆಮದು ಮಾಡಿಕೊಂಡ ಬಟಾಣಿಗಳು ದೇಶೀಯ ದ್ವಿದಳ ಧಾನ್ಯಗಳಿಗೆ ಹೋಲಿಸಿದರೆ ಗಮನಾರ್ಹವಾದ ಕಡಿಮೆ ಬೆಲೆಗೆ ಮಾರುಕಟ್ಟೆ ತಲುಪುತ್ತಿವೆ ಎಂದು ರಮೇಶ್ ಗಮನಸೆಳೆದಿದ್ದಾರೆ.
"ಆಮದು ಮಾಡಿಕೊಂಡ ಬಟಾಣಿಗಳ ಬೆಲೆ ಕ್ವಿಂಟಲ್‌ಗೆ 3,500 ರೂ.ಗಳಾಗಿದ್ದು, ಇದು ದೇಶೀಯ ದ್ವಿದಳ ಧಾನ್ಯಗಳ ಬೆಲೆ ಕ್ವಿಂಟಲ್‌ಗೆ 7,000-8,000 ರೂ.ಗಳ MSP ಯ ಸರಿಸುಮಾರು ಅರ್ಧದಷ್ಟು ಇದೆ. ಇದರ ಪರಿಣಾಮವಾಗಿ, ಅಗ್ಗದ ಆಮದುಗಳ ವಿರುದ್ಧ ದೇಶೀಯ ದ್ವಿದಳ ಧಾನ್ಯಗಳು ಸ್ಪರ್ಧಿಸಲು ಅಸಾಧ್ಯ. ಇದು ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶದ ರೈತರಿಗೆ ಭಾರಿ ನಷ್ಟ ಉಂಟು ಮಾಡುತ್ತಿದೆ" ಎಂದು ಜೈರಾಮ್ ರಮೇಶ್ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ರೈತರು ಭಾರಿ ನಷ್ಟ ಅನುಭವಿಸುತ್ತಿದ್ದರೂ, ಹಳದಿ ಬಟಾಣಿಯ ಅತಿದೊಡ್ಡ ಆಮದುದಾರ ಅದಾನಿ ಗ್ರೂಪ್ ಗಣನೀಯ ಲಾಭವನ್ನು ಗಳಿಸುತ್ತಿದೆ ಎಂದು ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಹೇಳಿಕೆ ಬಗ್ಗೆ ಕೇಂದ್ರ ಸರ್ಕಾರ ಅಥವಾ ಅದಾನಿ ಗ್ರೂಪ್‌ನಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
Advertisement