
ನವದೆಹಲಿ: ಸ್ವದೇಶಿಗೆ ಹೆಚ್ಚು ಒತ್ತುಕೊಡುತ್ತಿರುವ ಸಂದರ್ಭದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ವಿದೇಶಿ Gmailಗೆ ಗುಡ್ ಬೈ ಹೇಳಿ, ಸ್ವದೇಶಿ ಇಮೇಲ್ ಸೇವೆ ಜೊಹೊ ಮೇಲ್‌ಗೆ ಶಿಫ್ಟ್ ಆಗಿದ್ದಾರೆ.
ಇದು ಅಮೆರಿಕದೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ನಡುವೆ ಕೇಂದ್ರ ಸರ್ಕಾರ ನಡೆಸುತ್ತಿರುವ 'ಸ್ವದೇಶಿ' ತಂತ್ರಜ್ಞಾನದ ಪ್ರಗತಿಯಲ್ಲಿ ಮತ್ತೊಂದು ಹೆಜ್ಜೆಯಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ ಅವರು, ತಮ್ಮ ಹೊಸ ಅಧಿಕೃತ ಇಮೇಲ್ ವಿಳಾಸ amitshah.bjp@zohomail.in ಅನ್ನು ಹಂಚಿಕೊಂಡಿದ್ದಾರೆ.
"ನಾನು ಜೊಹೊ ಮೇಲ್‌ಗೆ ಬದಲಾಯಿಸಿದ್ದೇನೆ. ಮುಂದಿನ ಎಲ್ಲಾ ಸಂವಹನ ಇದೇ ಇಮೇಲ್ ಮೂಲಕ ನಡೆಯಲಿದೆ. ದಯವಿಟ್ಟು ಎಲ್ಲರೂ ಈ ಇಮೇಲ್ ವಿಳಾಸ ಬಳಸಿ. ನಿಮ್ಮ ಗಮನ ಈ ಕಡೆ ನೀಡಿದ್ದಕ್ಕೆ ಧನ್ಯವಾದಗಳು'' ಎಂದು ಅಮಿತ್ ಶಾ ಬರೆದುಕೊಂಡಿದ್ದಾರೆ.
ಈ ಘೋಷಣೆಯು ಕೇಂದ್ರದ ಆತ್ಮನಿರ್ಭರ ಭಾರತ್ ದೃಷ್ಟಿಕೋನಕ್ಕೆ ಹೊಂದಿಕೆಯಾದರೂ, ಅಮಿತ್ ಶಾ ಅವರ ಈ ದಿಢೀರ್ ನಿರ್ಧಾರದ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಗೃಹ ಸಚಿವರ ಈ ನಡೆಯನ್ನು ಜೊಹೊ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಅವರು ತಕ್ಷಣ ಸ್ವಾಗತಿಸಿದ್ದು, ಇದು ಭಾರತದ ತಂತ್ರಜ್ಞಾನ ಪರಿಸರ ವ್ಯವಸ್ಥೆಗೆ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.
ಟ್ರಂಪ್‌ಗೆ ಅಮಿತ್ ಶಾ ಠಕ್ಕರ್
ಅಮಿತ್ ಶಾ ಅವರು ಇಂದು ಮಾಡಿರುವ ಪೋಸ್ಟ್ ನ ಕೊನೆಯಲ್ಲಿ ನಿಮ್ಮ ಗಮನ ಈ ಕಡೆ ನೀಡಿದ್ದಕ್ಕೆ ಧನ್ಯವಾದಗಳು'' ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಠಕ್ಕರ್ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ತಮ್ಮ ಭಾಷಣದ ಕೊನೆಯಲ್ಲಿ ಯಾವಾಗಲೂ 'Thank you for your kind attention to this matter' ಎಂದು ಹೇಳ್ತಾರೆ. ಇದೀಗ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದೇ ವಾಕ್ಯವನ್ನು ಉಲ್ಲೇಖಿಸಿದ್ದಾರೆ. ಅದರರ್ಥ, ಭಾರತ ಮೂಲದ ಜೋಹೋ, ಜಿಮೇಲ್ ಮತ್ತು ಮೈಕ್ರೋಸಾಫ್ಟ್ ಔಟ್‌ಲುಕ್‌ಗೆ ಠಕ್ಕರ್ ಕೊಡಲಿದೆ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ.
Advertisement