ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಕೂಗು ಆಗಾಗ ಕೇಳುತ್ತಿರುತ್ತದೆ. ಝೋಹೋ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಅವರು ಇತ್ತೀಚೆಗೆ ಎಕ್ಸ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಮಾಡಿರುವ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರನ್ನು ತಮ್ಮ ಮನೆ ಮಾಡಿಕೊಂಡಿರುವ ಜನರು ಕನ್ನಡ ಮಾತನಾಡಲು ತಿಳಿದಿರಬೇಕು ಎಂದು ಹಂಚಿಕೊಂಡಿದ್ದಾರೆ. ಅವರ ಅಭಿಪ್ರಾಯ ಪ್ರಕಾರ, ಕನ್ನಡ ಮಾತನಾಡದಿದ್ದರೆ ಅಗೌರವ.
ಝೋಹೋ ಸಿಇಒ ಶ್ರೀಧರ್ ವೆಂಬು ಅವರು ಬೆಂಗಳೂರಿನ ಜನರಿಗಾಗಿ ಕನ್ನಡಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.
ಆರಂಭವಾಗಿದ್ದು ಹೇಗೆ?: ಇಬ್ಬರು ಪುರುಷರು "ಹಿಂದಿ ರಾಷ್ಟ್ರೀಯ ಭಾಷೆ" ಎಂದು ಬರೆದಿರುವ ಟಿ-ಶರ್ಟ್‌ಗಳನ್ನು ಧರಿಸಿರುವ ಪೋಸ್ಟ್‌ಗೆ ಸಂಬಂಧಿಸಿದ ಹೇಳಿಕೆಗೆ ಶ್ರೀಧರ್ ವೆಂಬು ಪ್ರತಿಕ್ರಿಯಿಸಿದ್ದಾರೆ. ಪೋಸ್ಟ್‌ನಲ್ಲಿ ಬೆಂಗಳೂರು ಪ್ರವಾಸಕ್ಕೆ ಪರಿಪೂರ್ಣವಾದ ಟೀ ಶರ್ಟ್ ಎಂಬ ಶೀರ್ಷಿಕೆ ಇತ್ತು.
ಶ್ರೀಧರ್ ವೆಂಬು ಹೇಳಿದ್ದೇನು?
ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಶ್ರೀಧರ್ ವೆಂಬು ಬೆಂಗಳೂರಿನಲ್ಲಿ ನೀವು ವಾಸಿಸುತ್ತಿದ್ದು, ಇಲ್ಲಿನ ನಾಗರಿಕರಾಗಿದ್ದರೆ ನೀವು, ನಿಮ್ಮ ಮಕ್ಕಳು ಕಡ್ಡಾಯವಾಗಿ ಕನ್ನಡವನ್ನು ಕಲಿಯಬೇಕು ಎಂದು ಬರೆದಿದ್ದಾರೆ. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದರೂ ಕನ್ನಡ ಮಾತನಾಡದಿದ್ದರೆ ಅಗೌರವ ಸಲ್ಲಿಸಿದ ಹಾಗೆ. ಬೇರೆ ರಾಜ್ಯಗಳಿಂದ ಬರುವ ಚೆನ್ನೈನಲ್ಲಿರುವ ನಮ್ಮ ಉದ್ಯೋಗಿಗಳು ಇಲ್ಲಿಗೆ ಬಂದ ನಂತರ ತಮಿಳು ಕಲಿಯಲು ಪ್ರಯತ್ನಿಸುವಂತೆ ನಾನು ಆಗಾಗ್ಗೆ ಕೇಳಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.
ಜನರ ಪ್ರತಿಕ್ರಿಯೆ ಏನಿದೆ?
ಶ್ರೀಧರ್ ವೆಂಬು ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಗೆ ಕನ್ನಡಿಗರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರೆ ಅನ್ಯರು ಬೇರೆ ರೀತಿ ಪ್ರತಿಕ್ರಿಯಿಸಿದ್ದಾರೆ. ನನಗೆ ಮುಂಬೈನಲ್ಲಿ ಅನೇಕ ಕನ್ನಡ ಸ್ನೇಹಿತರಿದ್ದಾರೆ, ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಯಾರಿಗೂ ಮರಾಠಿ ಬರುವುದಿಲ್ಲ. ಹಾಗಾದರೆ ಅದು ಸರಿಯೇ ಎಂದು ಕೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ನೀವು ಇಲ್ಲಿ ಅಪಕ್ವವಾಗಿ ಕಾಣುತ್ತೀರಿ. ಯಾವುದೇ ಭಾಷೆ, ಸಂಸ್ಕೃತಿಗೆ ಅಗೌರವ ತೋರುವುದು ಸ್ವೀಕಾರಾರ್ಹವಲ್ಲ ಆದರೆ ಭಾಷೆಯನ್ನು ಕಲಿಯದಿರುವುದು ಅಗೌರವವೆ, ಇದೇನಿದು ನಿಮ್ಮ ಲಾಜಿಕ್ ಎಂದು ಕೇಳಿದ್ದಾರೆ.
ಕೋಲ್ಕತ್ತಾದಲ್ಲಿ ವಾಸಿಸುವ ಹೆಚ್ಚಿನ ತಮಿಳರು ಮತ್ತು ಮಲಯಾಳಿಗಳು ಬಂಗಾಳಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಅವರಲ್ಲಿ ಒಬ್ಬರು ನನ್ನ ಇಂಗ್ಲಿಷ್ ಪ್ರಾಧ್ಯಾಪಕ ದಿವಂಗತ ಎನ್ ವಿಶ್ವನಾಥನ್. ಅವರು ಪ್ರಶಸ್ತಿ ವಿಜೇತ ನಟರೂ ಆಗಿದ್ದರು. ನೀವು ದೀರ್ಘಕಾಲ ಬದುಕುತ್ತಿದ್ದರೆ ಸ್ಥಳೀಯ ಭಾಷೆಯ ಉಪಭಾಷೆಯನ್ನು ಪ್ರೀತಿಸಿ ಎಂದು ಬರೆದಿದ್ದಾರೆ.
ಭಾಷೆಯು ಸಂವಹನದ ಸಾಧನವಾಗಿದೆ. ಜನರು ತಮ್ಮ ಉಳಿವಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಇದು ಸಾಮಾನ್ಯ ಜ್ಞಾನವಲ್ಲವೇ, ಬೆಂಗಳೂರಿನಲ್ಲಿ ನಾನು ಕನ್ನಡಿಗರಿಗಿಂತ ಕನ್ನಡೇತರರನ್ನು ಹೆಚ್ಚು ಭೇಟಿಯಾಗುತ್ತೇನೆ. ಅವರಲ್ಲಿ ಶೇಕಡಾ 90 ಮಂದಿ ಇಂಗ್ಲಿಷ್ ಬಳಸುತ್ತಾರೆ. ಬೆಂಗಳೂರಿನಲ್ಲಿರುವವರು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ ಭಾಷೆಗಳು ಪುಸ್ತಕಗಳಿಂದ ಕಲಿಯುವುದಿಲ್ಲ, ಸುತ್ತಮುತ್ತಲಿನ ಪರಿಸರದಿಂದ ಕಲಿಯುತ್ತವೆ ಎಂದು ಮತ್ತೊಬ್ಬರು ಎಂದಿದ್ದಾರೆ.
ಶ್ರೀಧರ್ ವೆಂಬು ಯಾರು?
ಫೋರ್ಬ್ಸ್ ಪ್ರಕಾರ, ಉದ್ಯಮಿ ಶ್ರೀಧರ್ ವೆಂಬು ಅವರ ಉದ್ಯಮದ ನಿವ್ವಳ ಮೌಲ್ಯವು 5.8 ಬಿಲಿಯನ್ ಡಾಲರ್ ಆಗಿದೆ. ಅವರು ಕ್ಲೌಡ್-ಆಧಾರಿತ ವ್ಯಾಪಾರ ಸಾಫ್ಟ್‌ವೇರ್ ನ್ನು ರಚಿಸುವ ಕಂಪನಿಯಾದ ಖಾಸಗಿಯಾಗಿ ಹೊಂದಿರುವ ಝೋಹೋ ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. 1994 ರಲ್ಲಿ ಕ್ವಾಲ್ಕಾಮ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
Advertisement