
ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 25 ರಂದು ಅಯೋಧ್ಯೆಯ ರಾಮ ಮಂದಿರದ ಶಿಖರದ ಮೇಲೆ 21 ಅಡಿ ಎತ್ತರದ ಧಾರ್ಮಿಕ(ಧರ್ಮ) ಧ್ವಜವನ್ನು ಹಾರಿಸಲಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಈ ಕಾರ್ಯಕ್ರಮವು ದೇವಾಲಯದ ನಿರ್ಮಾಣವನ್ನು ಅಧಿಕೃತವಾಗಿ ಪೂರ್ಣಗೊಳಿಸಲಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ ಅವರು, ನವೆಂಬರ್ 25 ರಂದು ಪ್ರಧಾನಿ ಮೋದಿ ಅವರ ಆಗಮನವನ್ನು ದೃಢಪಡಿಸಿದರು ಮತ್ತು ಈ ಸಮಾರಂಭ "ಐತಿಹಾಸಿಕ"ವಾಗಿರುತ್ತದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಧರ್ಮ ಧ್ವಜಾರೋಹಣದ ಮೂಲಕ, ನಂಬಿಕೆ ಮತ್ತು ಕಾಯುವಿಕೆಯ ಬಹುದಿನಗಳ ಕನಸು ಈಗ ನನಸಾಗಿದೆ ಎಂದು ಜಗತ್ತಿಗೆ ತಿಳಿಸುತ್ತಾರೆ ಎಂದರು.
ಮುಖ್ಯ ದೇವಾಲಯ ನಿರ್ಮಾಣವು "ಬಹುತೇಕ ಪೂರ್ಣಗೊಂಡಿದೆ. ಹೊರಗೋಡೆಯ ನಿರ್ಮಾಣವೂ ಅಂತಿಮ ಹಂತದಲ್ಲಿದ್ದು, ಶೇಷಾವತಾರ ದೇವಸ್ಥಾನ, ಸಪ್ತ ಮಂಟಪ ಮತ್ತು ಪುಷ್ಕರಣಿ(ಪವಿತ್ರ ಕೊಳ) ಕಾಮಗಾರಿ ಪೂರ್ಣಗೊಂಡಿದೆ ಎಂದರು.
ದೇವಾಲಯದ ಪಕ್ಕದಲ್ಲಿ ಭಕ್ತರಿಗಾಗಿ ಶೂ ರ್ಯಾಕ್ ಸೌಲಭ್ಯವನ್ನು ನಿರ್ಮಿಸಲಾಗುತ್ತಿದ್ದು, ಇದು ಪೂರ್ಣಗೊಳ್ಳುವ ಹಂತದಲ್ಲಿದ್ದು, ನವೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.
Advertisement