
ರಣಥಂಬೋರ್: ಪ್ರಾದೇಶಿಕ ಗಡಿಗಾಗಿ ಮಗಳೊಂದಿಗೆ ತಾಯಿ ಹುಲಿ ಕಾದಾಟ ನಡೆಸಿರುವ ಘಟನೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಈ ಬಿಗ್ ಫೈಟ್ ವೀಕ್ಷಿಸಿದ ಪ್ರವಾಸಿಗರು ದಂಗಾಗಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಪ್ರಸಿದ್ಧ ಹೆಣ್ಣು ಹುಲಿ ರಿದ್ಧಿ (T-124) ಹುಲಿ ಸಂರಕ್ಷಿತಾರಣ್ಯದ ಮೂರನೇ ವಲಯದ ಪ್ರಾದೇಶಿಕ ಗಡಿಗೆ ಸಂಬಂಧಿಸಿದಂತೆ ತನ್ನ ಮಗಳು ಮೀರಾ ಜೊತೆಗೆ ಕಾದಾಟ ನಡೆಸಿದೆ. ಜಂಗಲ್ ಸಫಾರಿ ವೇಳೆಯಲ್ಲಿ ಹುಲಿಗಳ ಅಪರೂಪದ ಹಾಗೂ ಅಸಾಮಾನ್ಯ ವರ್ತನೆಯನ್ನು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಬೆಳಗಿನ ಸಫಾರಿ ವೇಳೆ ತಾಯಿ ಮತ್ತು ಮಗಳು ಪರಸ್ಪರರ ಸಮೀಪದಲ್ಲಿ ಕಾಣಿಸಿಕೊಂಡಿವೆ. ತದನಂತರ ಮೀರಾ ಇದು ನನ್ನ ಪ್ರದೇಶ ಎಂದು ರಿದ್ಧಿಗೆ ಸವಾಲು ಹಾಕಿದ್ದಾಳೆ. ಕೂಡಲೇ ಇಬ್ಬರ ನಡುವೆ ಕಾದಾಟ ಶುರುವಾಗಿದೆ.
ಎರಡೂ ಹುಲಿಗಳು ಜೋರಾಗಿ ಘರ್ಜಿಸುವ ಮೂಲಕ ಕಾದಾಟ ನಡೆಸಿವೆ. ಅವುಗಳ ಶಬ್ದಗಳು ಕಾಡಿನಲ್ಲಿ ಪ್ರತಿಧ್ವನಿಸಿದೆ. ಫೈಟ್ ಚಿಕ್ಕದಾದರೂ ತೀವ್ರವಾಗಿತ್ತು. ಅಂತಿಮವಾಗಿ ರಿದ್ಧಿ ಗೆದ್ದಿದ್ದು, ಮೀರಾ ಕೈಕೊಟ್ಟು ಮತ್ತೆ ಕಾಡಿಗೆ ಓಡಿದ್ದಾಳೆ. ರಿದ್ಧಿ ಮತ್ತು ಮೀರಾ ಇಬ್ಬರಿಗೂ ಗಾಯಗಳಾಗಿವೆ.
ಇದು ಪ್ರಾದೇಶಿಕ ಗಡಿಗೆ ಸಂಬಂಧಿಸಿದ ಕಾದಾಟ ಎಂದು ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದು ವನ್ಯಜೀವಿಗಳ ಸ್ವಾಭಾವಿಕ ನಡವಳಿಕೆಯಾಗಿದೆ. ವಿಶೇಷವಾಗಿ ಮರಿಗಳು ಬೆಳೆದು ತಮ್ಮ ಸ್ವಂತ ಜಾಗವನ್ನು ಹುಡುಕಲು ಪ್ರಾರಂಭಿಸುತ್ತವೆ.
ರಿದ್ದಿಯ ಮೂರು ಮರಿಗಳು ಬೆಳೆದು ತಮ್ಮ ತಾಯಿಯಿಂದ ಪ್ರತ್ಯೇಕವಾಗಿ ತಮ್ಮದೇ ಆದ ಪ್ರದೇಶಗಳನ್ನು ಸ್ಥಾಪಿಸಲು ಪ್ರಾರಂಭಿಸಿದಾಗ ಕಾದಾಟ ಉಂಟಾಗಿದೆ. ಮರಿಯು ತನ್ನ ಸ್ವಂತ ಪ್ರದೇಶವನ್ನು ಪಡೆಯಲು ಪ್ರಯತ್ನಿಸಿದಾಗ ಅದರ ಮೊದಲ ಸವಾಲು ಸಾಮಾನ್ಯವಾಗಿ ತಾಯಿಯೊಂದಿಗೆ ಇರುತ್ತದೆ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.
Advertisement