
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾತನಾಡಿದ್ದು, ಇಸ್ರೇಲ್ ಮತ್ತು ಹಮಾಸ್ ನಡುವೆ ಯಶಸ್ವಿ ಕದನ ವಿರಾಮ ಒಪ್ಪಂದ ಮತ್ತು ಶಾಂತಿ ಸಂಧಾನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
"ನನ್ನ ಸ್ನೇಹಿತ ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿದೆ. ಐತಿಹಾಸಿಕ ಗಾಜಾ ಶಾಂತಿ ಸಂಧಾನ ಯಶಸ್ಸಿಗೆ ಅವರನ್ನು ಅಭಿನಂದಿಸಿದೆ" ಎಂದು ಪ್ರಧಾನಿ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಸುಂಕದ ಉದ್ವಿಗ್ನತೆಯ ನಡುವೆ ಟ್ರಂಪ್ ಗೆ ಕರೆ ಮಾಡಿ ಮಾತನಾಡಿದ ಮೋದಿ, ವ್ಯಾಪಾರ ಮಾತುಕತೆಗಳಲ್ಲಿ ಸಾಧಿಸಿದ ಉತ್ತಮ ಪ್ರಗತಿಯನ್ನು ಪರಿಗಣಿಸಿದ್ದೇವೆ. ಮುಂಬರುವ ವಾರಗಳಲ್ಲಿ ನಿಕಟ ಸಂಪರ್ಕದಲ್ಲಿ ಮುಂದುವರಿಯಲು ಒಪ್ಪಿಕೊಂಡಿದ್ದೇವೆ" ಎಂದು ತಿಳಿಸಿದ್ದಾರೆ.
ಟ್ರಂಪ್ ಇಂದು, ತಮ್ಮ ಗಾಜಾ ಶಾಂತಿ ಸಂಧಾನದ ಮೊದಲ ಹಂತಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು. ಇದು ಬಹುನಿರೀಕ್ಷಿತ ಕದನ ವಿರಾಮವನ್ನು ಸೂಚಿಸುತ್ತದೆ.
"ಇಸ್ರೇಲ್ ಮತ್ತು ಹಮಾಸ್ ಎರಡೂ ನಮ್ಮ ಶಾಂತಿ ಸಂಧಾನದ ಮೊದಲ ಹಂತಕ್ಕೆ ಸಹಿ ಹಾಕಿವೆ ಎಂದು ಘೋಷಿಸಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ" ಎಂದು ಟ್ರಂಪ್ ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಕದನ ವಿರಾಮವನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಇದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ "ಬಲವಾದ ನಾಯಕತ್ವದ ಪ್ರತಿಬಿಂಬ" ಎಂದು ಶ್ಲಾಘಿಸಿದ್ದಾರೆ.
Advertisement