
ಲಖನೌ: ಸೆಪ್ಟೆಂಬರ್ 26 ರಂದು ಉತ್ತರ ಪ್ರದೇಶದ ಅಲಿಗಢದಲ್ಲಿ ಉದ್ಯಮಿಯೊಬ್ಬರನ್ನು ಹತ್ಯೆಗೈದ ಪ್ರಮುಖ ಆರೋಪಿಯಾಗಿರುವ ಅಖಿಲ ಭಾರತ ಹಿಂದೂ ಮಹಾಸಭಾದ(ABHM) ಪದಾಧಿಕಾರಿ ಪೂಜಾ ಶಕುನ್ ಪಾಂಡೆ ಅವರನ್ನು ಶನಿವಾರ ರಾಜಸ್ಥಾನದ ಭರತ್‌ಪುರದಿಂದ ಬಂಧಿಸಲಾಗಿದೆ.
ದ್ವಿಚಕ್ರ ವಾಹನ ಶೋರೂಂ ಮಾಲೀಕ ಅಭಿಷೇಕ್ ಗುಪ್ತಾ ಹತ್ಯೆ: 25 ವರ್ಷದ ದ್ವಿಚಕ್ರ ವಾಹನ ಶೋರೂಂ ಮಾಲೀಕ ಅಭಿಷೇಕ್ ಗುಪ್ತಾ ಅವರು ಹತ್ರಾಸ್‌ಗೆ ಬಸ್ ಹತ್ತುವಾಗ ಅಲಿಘಡದ ರೋರಾವರ್ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ಹತ್ಯೆಗೆ ಪೂಜಾ ಶಕುನ್ ಪಾಂಡೆ ಮತ್ತು ಆಕೆಯ ಪತಿ, ABHM ವಕ್ತಾರ ಅಶೋಕ್ ಪಾಂಡೆ, ಮೊಹಮ್ಮದ್ ಫಜಲ್ ಮತ್ತು ಆಸಿಫ್ ಎಂಬ ಇಬ್ಬರು ಶೂಟರ್‌ಗಳಿಗೆ ಸುಫಾರಿ ನೀಡಿದ್ದರು ಎನ್ನಲಾಗಿದೆ.
ಅದೇ ರಾತ್ರಿ ಪೂಜಾ ಮತ್ತು ಆಕೆಯ ಪತಿ ವಿರುದ್ಧ ರೋರಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೆಲವು ದಿನ ಅಭಿಷೇಕ್ ಗೆ ಲೈಂಗಿಕ ಕಿರುಕುಳ: ಶುಕ್ರವಾರ ತಡರಾತ್ರಿ ಭರತ್‌ಪುರದಿಂದ ಪೂಜಾ ಅವರನ್ನು ಬಂಧಿಸಲಾಗಿದೆ ಎಂದು ಅಲಿಘಡದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೀರಜ್ ಕುಮಾರ್ ಜಾದೌನ್ ತಿಳಿಸಿದ್ದಾರೆ. ಆಕೆ ಕೆಲವು ದಿನದಿಂದ ಅಭಿಷೇಕ್ ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಆಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಆತ ಕಳೆದುಕೊಂಡ ನಂತರ ಅವನ ಹತ್ಯೆಗೆ ಯೋಜಿಸಿದ್ದಳು ಎಂದು ಅಭಿಷೇಕ್ ಕುಟುಂಬ ಆರೋಪಿಸಿದೆ.
ಅಲ್ಲದೇ ಪೂಜಾ ಮತ್ತು ಅಭಿಷೇಕ್ ನಡುವಿನ ವ್ಯವಹಾರವು ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸ್ ಮೂಲಗಳು ಸೂಚಿಸಿವೆ. ಅಶೋಕ್ ಪಾಂಡೆ ಮತ್ತು ಇಬ್ಬರು ಶೂಟರ್‌ಗಳು ಈಗಾಗಲೇ ಜೈಲಿನಲ್ಲಿದ್ದಾರೆ.
ನಾಥೂರಾಂ ಗೋಡ್ಸೆ ಹೊಗಳಿ ಸುದ್ದಿಯಾಗಿದ್ದ ಪೂಜಾ:
'ಮಹಾಮಂಡಳೇಶ್ವರ' ಎಂಬ ಧಾರ್ಮಿಕ ಬಿರುದು ಹೊಂದಿದ್ದು, 'ಅನ್ನಪೂರ್ಣ ಮಾ' ಎಂದೂ ಕರೆಸಿಕೊಳ್ಳುವ ಪೂಜಾ ಶಕುನ್ ಪಾಂಡೆ, ಅಭಿಷೇಕ್ ಗುಪ್ತಾ ಕೊಲೆಯಾದ ರಾತ್ರಿಯಿಂದ ತಲೆಮರೆಸಿಕೊಂಡಿದ್ದು, ಆಕೆಯ ಬಂಧನಕ್ಕೆ ರೂ. 50,000 ಬಹುಮಾನ ಘೋಷಿಸಲಾಗಿತ್ತು. ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಸಾರ್ವಜನಿಕವಾಗಿ ಹೊಗಳಿದ್ದಕ್ಕಾಗಿ ಪೂಜಾ ಈ ಹಿಂದೆ ಸುದ್ದಿಯಾಗಿದ್ದರು.
ಬಂಧನದ ನಂತರ ಆಕೆಯನ್ನು ವಿಚಾರಣೆಗಾಗಿ ಅಲಿಗಢಕ್ಕೆ ಕರೆತರಲಾಗಿದೆ. ಪೂಜಾ ಶಕುನ್ ಪಾಂಡೆ ಮತ್ತು ಅಶೋಕ್ ಪಾಂಡೆ ಮತ್ತು ತನ್ನ ಮಗನ ನಡುವಿನ ಸಂಬಂಧವು ಹದಗೆಟ್ಟಿತ್ತು ಎಂದು ಗುಪ್ತಾ ಅವರ ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
Advertisement