
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯಲ್ಲಿ ಒಡಿಶಾ ಮೂಲದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಮೇಲೆ ಅಪರಿಚಿತ ವ್ಯಕ್ತಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಿನ್ನೆ ಶುಕ್ರವಾರ ರಾತ್ರಿ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜು ಆವರಣದ ಹೊರಗೆ ದ್ವಿತೀಯ ವರ್ಷದ ವಿದ್ಯಾರ್ಥಿನಿ ತನ್ನ ಸ್ನೇಹಿತರೊಬ್ಬರೊಂದಿಗೆ ಊಟಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಆಕೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಒಡಿಶಾದ ಜಲೇಶ್ವರ ಮೂಲದ ವಿದ್ಯಾರ್ಥಿನಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ನಾವು ತನಿಖೆ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯ ಪೋಷಕರು, ಮಗಳ ಸ್ನೇಹಿತರು ಕರೆ ಮಾಡಿ ವಿಷಯ ತಿಳಿಸಿದರು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಮಗಳು ತನ್ನ ಸ್ನೇಹಿತರೊಬ್ಬರೊಂದಿಗೆ ಊಟಕ್ಕೆ ಹೋದಾಗ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ವಿದ್ಯಾರ್ಥಿನಿಯ ತಾಯಿ ಆರೋಪಿಸಿದ್ದಾರೆ.
ನಾವು ಇಂದು ಬೆಳಗ್ಗೆ ಇಲ್ಲಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದೇವೆ. ಈ ಕಾಲೇಜು ಶೈಕ್ಷಣಿಕವಾಗಿ ಉತ್ತಮವಾಗಿದೆ ಎಂದು ತಿಳಿದು ಇಲ್ಲಿ ಸೇರಿಸಿದೆವು, ಈಗ ಇಂತಹ ಘಟನೆ ಆಗಿದೆ ಎಂದು ಅಳಲು ತೋಡಿಕೊಂಡರು.
ನಿನ್ನೆ ರಾತ್ರಿ 8-8.30 ರ ಸುಮಾರಿಗೆ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಕ್ಯಾಂಪಸ್ ಹೊರಗೆ ಹೋಗಿದ್ದಳು ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆ ಹೇಗಾಯಿತು
ಮೂವರು ಪುರುಷರು ಅಲ್ಲಿಗೆ ಬಂದಾಗ ಸ್ನೇಹಿತೆ ಅವಳನ್ನು ಒಂಟಿಯಾಗಿ ಬಿಟ್ಟು ಹೋದಳು. ಆ ವ್ಯಕ್ತಿಗಳು ಆಕೆಯ ಫೋನ್ ಕಸಿದುಕೊಂಡು ಕ್ಯಾಂಪಸ್‌ನ ಹೊರಗಿನ ಕಾಡಿಗೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದರು. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರಂತೆ.
ವಿದ್ಯಾರ್ಥಿನಿಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಅಧಿಕಾರಿ ಹೇಳಿದರು.
ರಾಷ್ಟ್ರೀಯ ಮಹಿಳಾ ಆಯೋಗದ (NCW) ತಂಡವು ಸಂತ್ರಸ್ತೆ ಮತ್ತು ಆಕೆಯ ಪೋಷಕರನ್ನು ಭೇಟಿ ಮಾಡಲು ದುರ್ಗಾಪುರದತ್ತ ತೆರಳುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಹೆಚ್ಚುತ್ತಿದೆ. ಅಂತಹ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದು ತುಂಬಾ ದುರದೃಷ್ಟಕರ. ಅಂತಹ ಅಪರಾಧಗಳ ಹೆಚ್ಚಳವನ್ನು ತಡೆಯಲು ಮುಖ್ಯಮಂತ್ರಿ ಮುಂದೆ ಬಂದು ಒಟ್ಟಾಗಿ ಕೆಲಸ ಮಾಡಬೇಕೆಂದು ನಾನು ವಿನಂತಿಸುತ್ತೇನೆ ಎಂದು NCW ಸದಸ್ಯೆ ಅರ್ಚನಾ ಮಜುಂದಾರ್ ಒತ್ತಾಯಿಸಿದ್ದಾರೆ.
Advertisement