
ಕೋಲ್ಕತ್ತಾ: ಈ ವಾರದ ಆರಂಭದಲ್ಲಿ ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಕಾಲೇಜಿನ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದ ಸಿಬ್ಬಂದಿಯನ್ನು ನಂತರ ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದರು.
'ಭದ್ರತಾ ಸಿಬ್ಬಂದಿಯ ಉತ್ತರಗಳು ಅಸಂಗತವಾಗಿರುವುದನ್ನು ನಾವು ಕಂಡುಕೊಂಡ ನಂತರ ಇಂದು ಬೆಳಿಗ್ಗೆ ಅವರನ್ನು ಬಂಧಿಸಲಾಯಿತು. ಕೃತ್ಯ ನಡೆದ ವೇಳೆ ಕಾಲೇಜಿನಲ್ಲಿ ಅವರಿರುವುದು ಕಾಲೇಜಿನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ' ಎಂದು ಅವರು ಹೇಳಿದರು.
ಆ ಗಾರ್ಡ್ ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಆ ಸಮಯದಲ್ಲಿ ಆತ ಒಬ್ಬಂಟಿಯಾಗಿದ್ದಾನೋ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.
ಜೂನ್ 25ರ ಸಂಜೆ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ.
'ಮೂವರು ಆರೋಪಿಗಳು ಕೃತ್ಯ ಎಸಗುವುದನ್ನು ತಡೆಯಲು ಮತ್ತು ಅದಕ್ಕೆ ವಿರುದ್ಧವಾಗಿ ವರ್ತಿಸಲು ಏಕೆ ವಿಫಲರಾದರು ಎಂಬ ಪ್ರಶ್ನೆಗೆ ಸಿಬ್ಬಂದಿ ಸರಿಯಾದ ಉತ್ತರ ನೀಡಿಲ್ಲ. ಅಲ್ಲದೆ, ಅವರು ಏಕೆ ಮತ್ತು ಯಾರ ಸೂಚನೆಗಳ ಮೇರೆಗೆ ತಮ್ಮ ಕೊಠಡಿಯನ್ನು ತೊರೆದರು ಎಂಬುದಕ್ಕೆ ಅವರು ಉತ್ತರಿಸಬೇಕಾಗಿದೆ. ಇದು ಕೂಡ ಅಪರಾಧದಲ್ಲಿ ಒಂದು ರೀತಿಯ ಭಾಗಿಯಾಗುವಿಕೆಯಾಗಿದೆ' ಎಂದು ಅಧಿಕಾರಿ ಹೇಳಿದರು.
ಸಂತ್ರಸ್ತೆ ಪೊಲೀಸರಿಗೆ ನೀಡಿದ ಲಿಖಿತ ದೂರಿನಲ್ಲಿ, ಭದ್ರತಾ ಸಿಬ್ಬಂದಿ ತನಗೆ ಸಹಾಯ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ.
24 ವರ್ಷದ ಯುವತಿ ಪರೀಕ್ಷೆಗೆ ಅರ್ಜಿ ಭರ್ತಿ ಮಾಡಲು ಕಾಲೇಜಿಗೆ ಹೋಗಿದ್ದರು ಮತ್ತು ಅದು ಮುಗಿದ ನಂತರವೂ ಯೂನಿಯನ್ ಕೊಠಡಿಯಲ್ಲಿಯೇ ಇರಲು ಒತ್ತಾಯಿಸಲಾಯಿತು.
ಕ್ರಿಮಿನಲ್ ವಕೀಲ ಮತ್ತು ಕಾಲೇಜಿನ ಗುತ್ತಿಗೆ ಬೋಧಕೇತರ ಸಿಬ್ಬಂದಿಯೂ ಆಗಿರುವ ಹಳೆಯ ವಿದ್ಯಾರ್ಥಿ, ಆತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇನ್ನುಳಿದ ಇಬ್ಬರು ವಿದ್ಯಾರ್ಥಿಗಳು ಕಾವಲು ಕಾಯುತ್ತಾ ನಿಂತು, ತಮ್ಮ ಮೊಬೈಲ್ ಫೋನ್‌ಗಳಲ್ಲಿ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ,
ರಾತ್ರಿ 7.30 ರಿಂದ ರಾತ್ರಿ 10.30 ರವರೆಗೆ ತನ್ನ ಮೇಲೆ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಮೂವರನ್ನು ಗುರುವಾರ ಬಂಧಿಸಲಾಗಿದೆ.
Advertisement