
ನವದೆಹಲಿ: ದೀಪಾವಳಿ ಹಬ್ಬಕ್ಕಾಗಿ ಮನೆ ಸ್ವಚ್ಚಗೊಳಿಸುವಾಗ ಹಳೆಯ ಸೆಟಪ್ ಬಾಕ್ಸ್ ನಲ್ಲಿ ಅಡಗಿಸಿಡಲಾಗಿದ್ದ 2 ಸಾವಿರ ರೂ ಮುಖ ಬೆಲೆ ಸುಮಾರು 2 ಲಕ್ಷ ರೂ ಮೌಲ್ಯದ ನೋಟುಗಳು ಪತ್ತೆಯಾಗಿದೆ.
ಹೌದು.. ಖ್ಯಾತ ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡ ಸ್ಟೋರಿಯಲ್ಲಿ ಈ ಅಚ್ಚರಿ ವಿಚಾರ ವ್ಯಾಪಕ ವೈರಲ್ ಆಗುತ್ತಿದೆ. ಈ ಸ್ಟೋರಿಯಲ್ಲಿ ಬಳಕೆದಾರ ದೀಪಾವಳಿ ಸ್ವಚ್ಛತಾ ಕಾರ್ಯ ಹೇಗೆ ತನ್ನ ಮನೆಯಲ್ಲಿದ್ದ 2 ಲಕ್ಷ ರೂಗಳ ಗುಪ್ತನಿಧಿ ಪತ್ತೆ ಹಚ್ಚಲು ನೆರವಾಯಿತು ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ, ಭಾರತೀಯರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುವುದು ಸಾಮಾನ್ಯ. ಹೀಗೆ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಹಿಂದೂ ದೇವತೆ ಸಂಪತ್ತು ಮತ್ತು ಸಮೃದ್ಧಿ ಮಾತೆ ಲಕ್ಷ್ಮಿ ಅವರಿಗೆ ಅದೃಷ್ಟವನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ.
ಅದೇ ರೀತಿ ಈಗ, ದೀಪಾವಳಿ ಸ್ವಚ್ಛತಾ ಕಾರ್ಯ 2 ಲಕ್ಷ ರೂ.ಗಳ ಗುಪ್ತ ನಿಧಿಯನ್ನು ಪತ್ತೆಹಚ್ಚಲು ತಮ್ಮ ಕುಟುಂಬಕ್ಕೆ ಹೇಗೆ ಸಹಾಯ ಮಾಡಿದೆ ಎಂಬುದನ್ನು ರೆಡ್ಡಿಟ್ ಬಳಕೆದಾರರು ಬಹಿರಂಗಪಡಿಸಿದ್ದಾರೆ.
"2025 ರ ಅತಿದೊಡ್ಡ ದೀಪಾವಳಿ ಸಫಾಯಿ" ಎಂಬ ಶೀರ್ಷಿಕೆಯ ಈಗ ವೈರಲ್ ಆಗಿರುವ ರೆಡ್ಡಿಟ್ ಪೋಸ್ಟ್‌ನಲ್ಲಿ, ತಮ್ಮ ತಾಯಿ ಹಳೆಯ 2,000 ರೂಪಾಯಿ ನೋಟುಗಳಲ್ಲಿ 2 ಲಕ್ಷ ರೂ.ಗಳ ನೋಟುಗಳನ್ನು ಗುಪ್ತವಾಗಿ ಡಿಟಿಎಚ್ ಬಾಕ್ಸ್ ನಲ್ಲಿ ಸಂಗ್ರಹಿಸಿಟ್ಟಿದ್ದು ಇದು ಸ್ವಚ್ಛತಾ ಕಾರ್ಯದ ವೇಳೆ ಪತ್ತೆಯಾಗಿದೆ ಎಂದು ಬಳಕೆದಾರರು ಬಹಿರಂಗಪಡಿಸಿದ್ದಾರೆ.
ಅಚ್ಚರಿ ಜೊತೆ ಆಘಾತ
ಅಡಗಿಸಿಟ್ಟಿದ್ದ ಗುಪ್ತ ಹಣ ದೊರೆತಿದ್ದು ಸಂತಸವೇ ಆದರೂ ಹೀಗೆ ಅಡಗಿಸಿಟ್ಟಿದ್ದ 2 ಸಾವಿರ ರೂ ಮುಖಬೆಲೆಯ ನೋಟುಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಚಾಲವಣೆಯಿಂದ ಹಿಂದಕ್ಕೆ ಪಡೆದಿದೆ. ಹೀಗಾಗಿ ಹಾಲಿ ದೊರೆತಿರುವ 2 ಸಾವಿರ ರೂ ಮುಖಬೆಲೆಯ ನೋಟುಗಳು ಅಮಾನ್ಯ ಎಂದು ಹೇಳಲಾಗುತ್ತಿದೆ.
ಕಮೆಂಟ್ ಗಳ ಸುರಿಮಳೆ
ಇನ್ನು ಈ ಪೋಸ್ಟ್ ಇದೀಗ ವ್ಯಾಪಕ ಪ್ರತಿಕ್ರಿಯೆ ಪಡೆಯುತ್ತಿದ್ದು, ಈ ಪೈಕಿ ಓರ್ವ ಬಳಕೆದಾರ, 'ಕೇಂದ್ರ ಸರ್ಕಾರ ಹಂತ ಹಂತವಾಗಿ ಈ 2 ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದುಕೊಂಡಿದೆ. ಆದಾಗ್ಯೂ ಅವು ಇನ್ನೂ ಕಾನೂನುಬದ್ಧವಾಗಿವೆ.
20 ಸಾವಿರ ರೂ. ಮಿತಿಯೊಂದಿಗೆ ನೀವು ಅವುಗಳನ್ನು ಗೊತ್ತುಪಡಿಸಿದ ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು' ಎಂದು ಓರ್ವ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ಮತ್ತೋರ್ವ ಬಳಕೆದಾರ, "ನೀವು ಅದನ್ನು ಆರ್‌ಬಿಐಗೆ ಹಣ ತೆಗೆದುಕೊಂಡು ಹೋಗಲು ಯೋಜಿಸುತ್ತಿದ್ದರೆ, ಮೊದಲು ನಿಮ್ಮ ಸಿಎ (ಚಾರ್ಟೆಡ್ ಅಕೌಂಟೆಂಟ್) ಅವರನ್ನು ಸಂಪರ್ಕಿಸಿ ಮತ್ತು ನೀವು ಆರ್‌ಬಿಐಗೆ ಹೇಳುವ ನೆಪಗಳಿಗಾಗಿ ಅವರಿಂದ ಸಲಹೆ ಪಡೆಯಿರಿ." ಎಂದು ಸಲಹೆ ನೀಡಿದ್ದಾರೆ.
ನೋಟು ವಿನಿಮಯ
ಅಂದಹಾಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೇ 19, 2023 ರಂದು ಚಲಾವಣೆಯಿಂದ 2000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ, 5,884 ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಹೇಳಲಾಗಿದೆ.
ಚಲಾವಣೆಯಲ್ಲಿರುವ 2,000 ರೂ. ನೋಟುಗಳ ಒಟ್ಟು ಮೌಲ್ಯ ಮೇ 19, 2023 ರಂದು ವ್ಯವಹಾರದ ಮುಕ್ತಾಯದ ವೇಳೆಗೆ 3.56 ಲಕ್ಷ ಕೋಟಿ ರೂ.ಗಳಷ್ಟಿತ್ತು. ಅಂದರೆ ಚಲಾವಣೆಯಲ್ಲಿರುವ 98.35 ಪ್ರತಿಶತ ನೋಟುಗಳು ಇಲ್ಲಿಯವರೆಗೆ ಹಿಂತಿರುಗಿವೆ.
2023 ರಿಂದ RBI ನ 19 ವಿತರಣಾ ಕಚೇರಿಗಳಲ್ಲಿ 2000 ರೂ. ನೋಟುಗಳ ವಿನಿಮಯ ಸೌಲಭ್ಯ ಲಭ್ಯವಿದೆ. ವಿತರಣಾ ಕಚೇರಿಗಳು ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂಗಳಲ್ಲಿವೆ.
Advertisement