
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಷೇಶ ಸ್ಥಾನಮಾನ ರದ್ಧತಿ ಮತ್ತು ಅಲ್ಲಿ ಜನರಿಗೆ "ಅಭಿವ್ಯಕ್ತ ಸ್ವಾತಂತ್ರ್ಯ ನಿರಾಕರಣೆ"ಯ ಕಾರಣ ನೀಡಿ 2019 ರಲ್ಲಿ ಐಎಎಸ್ ಹುದ್ದೆ ತ್ಯಜಿಸಿದ್ದ ಕಣ್ಣನ್ ಗೋಪಿನಾಥನ್ ಅವರು ಸೋಮವಾರ ಕಾಂಗ್ರೆಸ್ ಸೇರಿದರು ಮತ್ತು ದೇಶದ ಅತ್ಯಂತ ಹಳೆಯ ಪಕ್ಷ ಮಾತ್ರ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬಲ್ಲದು ಎಂದು ಹೇಳಿದ್ದಾರೆ.
ಇಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಪಕ್ಷದ ನಾಯಕರಾದ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಮತ್ತು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ, ರಾಜಕಾರಣಿಯಾದ ಶಶಿಕಾಂತ್ ಸೆಂಥಿಲ್ ಅವರ ಸಮ್ಮುಖದಲ್ಲಿ ಗೋಪಿನಾಥನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
"ದೇಶದ ದೀನದಲಿತ ಮತ್ತು ಅಂಚಿನಲ್ಲಿರುವ ಜನರ ಬಗ್ಗೆ ಉತ್ಸಾಹ ಹೊಂದಿರುವ ಮತ್ತು ಯಾವಾಗಲೂ ನ್ಯಾಯ ಹಾಗೂ ಏಕತೆಗಾಗಿ ಹೋರಾಡಿದ ಧೈರ್ಯಶಾಲಿ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಗೋಪಿನಾಥನ್ ಈಶಾನ್ಯ ಮತ್ತು ದೇಶದ ಇತರ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ" ಎಂದು ವೇಣುಗೋಪಾಲ್ ಹೇಳಿದರು.
ಕೇರಳದಲ್ಲಿ ಜನಿಸಿದ ಗೋಪಿನಾಥನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು, ಇದು ನ್ಯಾಯಕ್ಕಾಗಿ ಹೋರಾಡುವ ಏಕೈಕ ಪಕ್ಷವಾಗಿದೆ ಎಂದು ಅವರು ಹೇಳಿದರು.
"ಗೋಪಿನಾಥನ್ ಅವರು 2019 ರಲ್ಲಿ ಐಎಸ್ಎಸ್ ಹುದ್ದೆಗೆ ರಾಜೀನಾಮೆ ನೀಡಿದರು. ಆದರೆ ಅವರ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಲಾಗಿಲ್ಲ. ನ್ಯಾಯಕ್ಕಾಗಿ ಮತ್ತು ಅಂಚಿನಲ್ಲಿರುವವರಿಗಾಗಿ ಹೋರಾಡುವ ಅಧಿಕಾರಿಗಳು ಸರ್ಕಾರದಿಂದ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ವಿದ್ಯಮಾನವು ಹರಿಯಾಣ ಮತ್ತು ಮಧ್ಯಪ್ರದೇಶ ಎರಡರಲ್ಲೂ ಸ್ಪಷ್ಟವಾಗಿದೆ. ಭಾರತದ ಮುಖ್ಯ ನ್ಯಾಯಾಧೀಶರು ಸಹ ಈ ದಾಳಿಗಳಿಂದ ಮುಕ್ತರಾಗಿಲ್ಲ" ಎಂದು ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಈ ವಿಭಜಕ ಕಾರ್ಯಸೂಚಿಯ ವಿರುದ್ಧ ಹೋರಾಡಲು ಇದು ಸರಿಯಾದ ಸಮಯ. ಆದ್ದರಿಂದ, ಇಂದು, ಅವರು ಕಾಂಗ್ರೆಸ್ ಸೇರುತ್ತಿರುವುದು ಸ್ವಾಗತಾರ್ಹ ಮತ್ತು ನಾವು ಅವರನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇವೆ" ಎಂದು ಅವರು ಹೇಳಿದರು.
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ 2012ರ ಬ್ಯಾಚ್‌ನ ಐಎಎಸ್ ಅಧಿಕಾರಿ ಗೋಪಿನಾಥನ್ ಅವರು, 2019 ರಲ್ಲಿ ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದೆ. ಆ ಸಮಯದಲ್ಲಿ, ಸರ್ಕಾರ ದೇಶವನ್ನು ತಪ್ಪು ದಾರಿಯಲ್ಲಿ ಮುನ್ನಡೆಸುತ್ತಿತ್ತು. ಈ ತಪ್ಪಿನ ವಿರುದ್ಧ ನಾನು ಹೋರಾಡಬೇಕು ಎಂದು ನಾನು ನಿರ್ಧರಿಸಿದೆ.
ಈ ನಿರ್ಧಾರದ ನಂತರ, ನಾನು ದೇಶದ 80-90 ಜಿಲ್ಲೆಗಳಿಗೆ ಪ್ರಯಾಣಿಸಿದೆ, ಜನರೊಂದಿಗೆ ಮಾತನಾಡಿದೆ ಮತ್ತು ಹಲವಾರು ನಾಯಕರನ್ನು ಭೇಟಿ ಮಾಡಿದೆ. ಕಾಂಗ್ರೆಸ್ ಪಕ್ಷ ಮಾತ್ರ ಈ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬಲ್ಲದು ಎಂದು ನಾನು ಅರಿತುಕೊಂಡೆ" ಎಂದು ಹೇಳಿದರು.
ಈ ಸರ್ಕಾರ, ಪ್ರಶ್ನೆಗಳನ್ನು ಕೇಳುವ ಪ್ರತಿಯೊಬ್ಬರಿಗೂ ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟುವುದನ್ನು ನಾವು ನೋಡಿದ್ದೇವೆ ಎಂದರು.
Advertisement