
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊಮ್ಮಗ ರಾಕೇಶ್ ಸಿದ್ದರಾಮಯ್ಯ ಮಗ ಧವನ್ ರಾಕೇಶ್ ಇತ್ತೀಚೆಗೆ ತಾತನ ಜೊತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಸಿದ್ದರಾಮಯ್ಯನವರು ಧವನ್ ನನ್ನು ರಾಜಕೀಯಕ್ಕೆ ಕರೆತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಾ ಎಂಬ ಮಾತುಗಳು ಕೇಳಿಬಂದಿದ್ದವು.
ಇದಕ್ಕೆ ಪುಷ್ಠಿ ನೀಡುವಂತೆ ಧವನ್ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದು, ರಾಹುಲ್ ಗಾಂಧಿ ಜೊತೆ ನಿಂತಿರುವ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ. ರಾಜಕೀಯ ಬಗೆಗಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಕಳೆದ ಆಗಸ್ಟ್ 8 ರಂದು, ನಮ್ಮ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸದಾವಕಾಶ ನನಗೆ ದೊರೆಯಿತು. ಪ್ರಾಮಾಣಿಕ ನಾಯಕರನ್ನು ನಾನು ಎಷ್ಟರ ಮಟ್ಟಿಗೆ ಗೌರವಿಸುತ್ತೇನೆ ಮತ್ತು ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂಬುದನ್ನು ನನ್ನ ತಾತ ಗುರುತಿಸಿದ್ದರಿಂದ ಇದು ಸಾಧ್ಯವಾಯಿತು. ಈ ರಾಜಕೀಯ ವಲಯದಲ್ಲಿ ಪ್ರಾಮಾಣಿಕತೆಯನ್ನು ಬಹುತೇಕವಾಗಿ ಕಡೆಗಣಿಸಲಾಗಿದೆ. ಆದರೆ, ಇದೇ ವಲಯದಲ್ಲಿ ಪ್ರಾಮಾಣಿಕವಾಗಿರಲು ಯತ್ನಿಸುವ, ತನ್ನ ನಂಬಿಕೆಗೆ ಬದ್ಧವಾಗಿರುವ ನಾಯಕರನ್ನು ಭೇಟಿಯಾಗಲು ನಾನು ಇಚ್ಛಿಸುತ್ತೇನೆ.
ರಾಜಕಾರಣವು ನನ್ನ ಬದುಕಿನ ಹಿನ್ನೆಲೆಯ ಒಂದು ಭಾಗವಾಗಿರುವುದು ನಿಜ. ಆದರೆ, ನಿರಂತರ ವಿರೋಧದ ನಡುವೆಯೂ ತನ್ನ ನಂಬಿಕೆ ಹಾಗೂ ಸಿದ್ಧಾಂತದ ಪರ ನಿಲ್ಲಲು ರಾಹುಲ್ ಗಾಂಧಿ ನಿರ್ಧರಿಸಿದರು. ಇಂತಹ ನಾಯಕನನ್ನು ಭೇಟಿಯಾಗಿದ್ದು ನಿಜವಾಗಿಯೂ ವಿಭಿನ್ನ ಅನುಭವವಾಗಿತ್ತು. ಅವರೊಂದಿಗೆ ಸ್ವಲ್ಪ ಕ್ಷಣಗಳ ಕಾಲ ಮಾತನಾಡಿದೆ. ಅವರ ಕುರಿತು ನನ್ನಲ್ಲಿರುವ ಅಪಾರ ಗೌರವದ ಬಗ್ಗೆ ತಿಳಿಸಿದೆ.
ಈಗ ವಿದ್ಯಾರ್ಥಿಯಾಗಿ, ಮುಂದೆ ವಕೀಲನಾಗಿ ನಾನು ಅವರ ಜೊತೆ ನಿಲ್ಲಲು, ಅವರೊಂದಿಗೆ ಹೆಜ್ಜೆ ಹಾಕಲು ಬಯಸುತ್ತೇನೆಂದು ಹೇಳಿದೆ. ಈಗ ನಾವೆಲ್ಲರೂ ಸ್ವಲ್ಪ ಹೆಚ್ಚು ಮುನ್ನೆಚ್ಚರಿಕೆಯಿಂದ ಯೋಚಿಸಬೇಕಿದೆ. ಹೆಚ್ಚು ಜಾಗೃತರಾಗಬೇಕಿದೆ. ಸತ್ಯ, ನಿಷ್ಠೆ ಹಾಗೂ ಪಾರದರ್ಶಕತೆಯ ಮೂಲಕ ದೇಶವನ್ನು ಮುನ್ನಡೆಸುವ ನಾಯಕರನ್ನು ಗೌರವಿಸಬೇಕಿದೆ. ರಾಹುಲ್ ಗಾಂಧಿ ಅವರು ಸಾರ್ವಜನಿಕರು ಹಾಗೂ ಮಾಧ್ಯಮಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸುತ್ತಾರೆ. ಅದೇ ರೀತಿ, ನಾವು ಸಹ ಸಂವಾದಕ್ಕೆ ಮುಂದಾಗಬೇಕಿದೆ. ಪ್ರಾಮಾಣಿಕ ಸಂವಾದವನ್ನು ನಾನು ಯಾವಾಗಲೂ ಸ್ವಾಗತಿಸುತ್ತೇನೆ ಎಂದು ಪೋಸ್ಟ್ನಲ್ಲಿ ಸಿದ್ದರಾಮಯ್ಯ ಮೊಮ್ಮಗ ಧವನ್ ರಾಕೇಶ್ ಬರೆದುಕೊಂಡಿದ್ದಾರೆ.
Advertisement