
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರು ಸೋಮವಾರ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಸೇರಿದರು.
ಇಂದು ಪಾಟ್ನಾದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಅವರ ಸಮ್ಮುಖದಲ್ಲಿ ಮೈಥಿಲಿ ಠಾಕೂರ್ ಅವರು ಬಿಜೆಪಿ ಸೇರಿದರು.
"ಪಕ್ಷ ನನಗೆ ಯಾವುದೇ ಜವಾಬ್ದಾರಿ ವಹಿಸಿದರೂ, ನಾನು ಅದನ್ನು ಮಾಡುತ್ತೇನೆ" ಎಂದು ಬಿಜೆಪಿ ಸೇರಿದ ನಂತರ ಮೈಥಿಲಿ ಹೇಳಿದ್ದಾರೆ.
25 ವರ್ಷದ ಮೈಥಿಲಿ ಠಾಕೂರ್, ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾದ ನಂತರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.
ಮೈಥಿಲಿ ಅವರಿಗೆ 2021 ರಲ್ಲಿ ಸಂಗೀತ ನಾಟಕ ಅಕಾಡೆಮಿಯ(ಎಸ್‌ಎನ್‌ಎ) ಪ್ರತಿಷ್ಠಿತ 'ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ' ಪ್ರಶಸ್ತಿ ನೀಡಲಾಗಿದೆ.
ಮಧುಬನಿ ಜಿಲ್ಲೆಯ ಬೆನಿಪಟ್ಟಿಯಲ್ಲಿ ಜನಿಸಿದ ಮೈಥಿಲಿ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹಾಗೂ ಸಾಹಿತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
Advertisement