
ಕಾಮನ್ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿ 2030 ರ ಶತಮಾನೋತ್ಸವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಪ್ರಸ್ತಾವಿತ ಆತಿಥೇಯ ನಗರವಾಗಿ ಅಹಮದಾಬಾದ್ ನ್ನು ಶಿಫಾರಸು ಮಾಡಿದೆ. ಇದು ಎರಡು ದಶಕಗಳ ನಂತರ ಭಾರತಕ್ಕೆ ಕಾಮನ್ ವೆಲ್ತ್ ಕ್ರೀಡಾಕೂಟ ಮರಳಲು ಅವಕಾಶ ನೀಡುತ್ತದೆ.
ಬುಧವಾರ ಘೋಷಿಸಲಾದ ಈ ಶಿಫಾರಸು ಭಾರತಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು 2036 ರ ಒಲಿಂಪಿಕ್ಸ್ ನ್ನು ಅದೇ ನಗರದಲ್ಲಿ ಆಯೋಜಿಸಲು ಪ್ರಯತ್ನಿಸುತ್ತಿದೆ. ನವೆಂಬರ್ 26 ರಂದು ಗ್ಲ್ಯಾಸ್ಗೋದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಪೂರ್ಣ ಕಾಮನ್‌ವೆಲ್ತ್ ಕ್ರೀಡಾ ಸದಸ್ಯತ್ವ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.
"2030 ರ ಶತಮಾನೋತ್ಸವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಪ್ರಸ್ತಾವಿತ ಆತಿಥೇಯ ನಗರವಾಗಿ ಭಾರತದ ಅಮ್ದವಾಡವನ್ನು ಶಿಫಾರಸು ಮಾಡುವುದಾಗಿ ಕಾಮನ್‌ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿ ಇಂದು ದೃಢಪಡಿಸಿದೆ" ಎಂದು ಕಾಮನ್‌ವೆಲ್ತ್ ಸ್ಪೋರ್ಟ್‌ನ ಪತ್ರಿಕಾ ಪ್ರಕಟಣೆ ತಿಳಿಸಿದೆ.
"ಅಮ್ದವಾಡ (ಭಾರತದ ಗುಜರಾತ್ ರಾಜ್ಯದಲ್ಲಿ ಅಹ್ಮದಾಬಾದ್ ಎಂದೂ ಕರೆಯುತ್ತಾರೆ) ನ್ನು ಈಗ ಪೂರ್ಣ ಕಾಮನ್‌ವೆಲ್ತ್ ಕ್ರೀಡಾ ಸದಸ್ಯತ್ವಕ್ಕೆ ಮುಂದಿಡಲಾಗುವುದು, ಅಂತಿಮ ನಿರ್ಧಾರವು ನವೆಂಬರ್ 26 ರಂದು ಗ್ಲ್ಯಾಸ್ಗೋದಲ್ಲಿ ನಡೆಯುವ ಕಾಮನ್‌ವೆಲ್ತ್ ಕ್ರೀಡಾ ಸಾಮಾನ್ಯ ಸಭೆಯಲ್ಲಿ ನಡೆಯಲಿದೆ" ಎಂದು ಅದು ಹೇಳಿದೆ.
ಸರ್ಧೆಯಲ್ಲಿದ್ದ ನೈಜೀರಿಯಾದ ಅಬುಜಾ ನಗರ ವನ್ನು ಅಹಮದಾಬಾದ್ ಹಿಂದಿಕ್ಕಿದೆ. ಕಾಮನ್‌ವೆಲ್ತ್ ಸ್ಪೋರ್ಟ್ ಎರಡೂ ನಗರಗಳು "ಆಕರ್ಷಕ ಪ್ರಸ್ತಾವನೆಗಳನ್ನು" ಸಲ್ಲಿಸಿದವು, ಆದರೆ ಅಂತಿಮವಾಗಿ ಶತಮಾನೋತ್ಸವ ಕ್ರೀಡಾಕೂಟಕ್ಕಾಗಿ ಭಾರತೀಯ ನಗರವನ್ನು ಆಯ್ಕೆ ಮಾಡಿಕೊಂಡವು ಎಂದು ಗಮನಿಸಿದೆ. ಆದಾಗ್ಯೂ, 2034 ರ ಕ್ರೀಡಾಕೂಟಕ್ಕೆ ಸಂಭಾವ್ಯ ಪರಿಗಣನೆ ಸೇರಿದಂತೆ ಅಬುಜಾದ ಭವಿಷ್ಯದ ಆತಿಥ್ಯದ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸಲು ಸಂಸ್ಥೆ ಬದ್ಧವಾಗಿದೆ, ಇದು ಆಫ್ರಿಕನ್ ಖಂಡಕ್ಕೆ ಕ್ರೀಡಾಕೂಟ ಆಯೋಜನೆಯ ಅವಕಾಶ ನೀಡುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಕಾಮನ್ವೆಲ್ತ್ ಸ್ಪೋರ್ಟ್‌ನ ಮಧ್ಯಂತರ ಅಧ್ಯಕ್ಷ ಡಾ. ಡೊನಾಲ್ಡ್ ರುಕರೆ ಮಾತನಾಡಿದ್ದು, "ಕಾರ್ಯಕಾರಿ ಮಂಡಳಿಯು ನೈಜೀರಿಯಾದ ಪ್ರಸ್ತಾವನೆಯ ದೃಷ್ಟಿಕೋನ ಮತ್ತು ಮಹತ್ವಾಕಾಂಕ್ಷೆಯಿಂದ ಪ್ರಭಾವಿತವಾಗಿದೆ" ಮತ್ತು ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
2010 ರಲ್ಲಿ ನವದೆಹಲಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದ ಭಾರತಕ್ಕೆ, 2030 ರ ಈವೆಂಟ್ ನ್ನು ಪಡೆದುಕೊಂಡಿರುವುದು "ಅಸಾಧಾರಣ ಗೌರವ" ಎಂದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ ಟಿ ಉಷಾ ಹೇಳಿದ್ದಾರೆ.
Advertisement