
ನವದೆಹಲಿ: ದೀಪಾವಳಿ ಹಬ್ಬಕ್ಕೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹಸಿರು ಪಟಾಕಿಗಳ(Green crackers) ಮಾರಾಟ ಮತ್ತು ಸಿಡಿಸುವಿಕೆಗೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.
ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ಜಂಟಿ ಕೋರಿಕೆಯನ್ನು ಮನ್ನಿಸಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಹಸಿರು ಪಟಾಕಿಗಳ ಮೇಲಿನ ನಿಷೇಧವನ್ನು ಸಡಿಲಗೊಳಿಸಿದೆ.
ದೀಪಾವಳಿಯ ಸಮಯದಲ್ಲಿ ಮಾಲಿನ್ಯ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಎನ್‌ಸಿಆರ್‌ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ತಾತ್ಕಾಲಿಕ ಕ್ರಮವಾಗಿ, ಅಕ್ಟೋಬರ್ 18 ರಿಂದ 21 ರವರೆಗೆ ನಾವು ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಪಟಾಕಿಗಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಅವು ಹಸಿರು ಪಟಾಕಿಗಳಿಗಿಂತ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ ಎಂದು ಸಿಜೆಐ ಆದೇಶದ ಕಾರ್ಯಕಾರಿ ಭಾಗವನ್ನು ಓದುತ್ತಾ ಹೇಳಿದರು.
ನಾವು ಸಮತೋಲಿತ ವಿಧಾನವನ್ನು ತೆಗೆದುಕೊಳ್ಳಬೇಕು, ಪರಿಸರದೊಂದಿಗೆ ರಾಜಿ ಮಾಡಿಕೊಳ್ಳದೆ ಮಿತವಾಗಿ ಪಟಾಕಿ ಸಿಡಿಸಲು ಅನುಮತಿ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಪಟಾಕಿ ತಯಾರಕರ ಮೇಲೆ ಗಸ್ತು ತಂಡಗಳು ನಿಯಮಿತವಾಗಿ ತಪಾಸಣೆ ನಡೆಸಲಿವೆ. ಅವರ ಕ್ಯುಆರ್ ಕೋಡ್‌ಗಳನ್ನು ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದೆಹಲಿ-ಎನ್‌ಸಿಆರ್ ಹೊರಗಿನ ಯಾವುದೇ ಪಟಾಕಿಗಳನ್ನು ಇಲ್ಲಿ ಮಾರಾಟ ಮಾರಾಟ ಮಾಡಬಾರದು. ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ, ಮಾರಾಟಗಾರರ ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ವಿವರವಾದ ಆದೇಶಕ್ಕಾಗಿ ಕಾಯಲಾಗುತ್ತಿದೆ.
ಅಕ್ಟೋಬರ್ 10 ರಂದು, ದೆಹಲಿ-ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ತನ್ನ ಆದೇಶಗಳನ್ನು ಕಾಯ್ದಿರಿಸಿತ್ತು.
ಎನ್ ಸಿಆರ್ ರಾಜ್ಯಗಳು ಮತ್ತು ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೀಪಾವಳಿ, ಗುರು ಪುರಬ್ ಮತ್ತು ಕ್ರಿಸ್‌ಮಸ್ ಹಬ್ಬಗಳ ಸಂದರ್ಭಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಸಮಯದ ಮೇಲೆ ಯಾವುದೇ ನಿರ್ಬಂಧಗಳಿಲ್ಲದೆ ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ನ್ನು ಒತ್ತಾಯಿಸಿದರು.
Advertisement