
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರತ್ತ ಶೂ ಎಸೆದ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ಅಟಾರ್ನಿ ಜನರಲ್ ಸಮ್ಮತಿ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಗುರುವಾರ ಮಾಹಿತಿ ನೀಡಲಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಮುಖ್ಯಸ್ಥ ಮತ್ತು ವಕೀಲ ವಿಕಾ ಸಿಂಗ್ ಅವರು ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಮನವಿ ಸಲ್ಲಿಸಿದರು.
ಅಕ್ಟೋಬರ್ 6 ರಂದು ನಡೆದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗಿದ್ದು, ಸುಪ್ರೀಂಕೋರ್ಟ್ ಸಮಗ್ರತೆ ಮತ್ತು ಘನತೆಯನ್ನು ಅವಮಾನಿಸಲಾಗುತ್ತಿದೆ. ಎಲ್ಲಾ ರೀತಿಯ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ಸಿಂಗ್ ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತ ತಡೆಯಾಜ್ಞೆ ನೀಡುವಂತೆ ಮೆಹ್ತಾ ಮತ್ತು ಸಿಂಗ್ ಅವರು ನ್ಯಾಯಾಲಯವನ್ನು ಒತ್ತಾಯಿಸಿದರು.
ಮಾತು ಮತ್ತು ಅಭಿವ್ಯಕ್ತಿಯ ಮೂಲಭೂತ ಹಕ್ಕು ಸಂಪೂರ್ಣವಲ್ಲ ಮತ್ತು ಇತರರ ಸಮಗ್ರತೆ ಮತ್ತು ಘನತೆಗೆ ಕುಂದು ತರಬಾರದು. ಇದು ಸಾಮಾಜಿಕ ಮಾಧ್ಯಮದ "ಅನಿಯಂತ್ರಿತ" ಸ್ವಭಾವದ ದುಷ್ಪರಿಣಾಮಗಳನ್ನು ಎತ್ತಿ ತೋರಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಆದಾಗ್ಯೂ, ತುರ್ತಾಗಿ ನ್ಯಾಯಾಂಗ ನಿಂದನೆ ಪ್ರಕರಣ ಪಟ್ಟಿಗೆ ಸೇರಲು ಇಷ್ಟಪಡದ ನ್ಯಾಯಪೀಠ, ಒಂದು ವಾರದ ನಂತರ ನೋಡೋಣ ಎಂದು ಹೇಳಿತು.
Advertisement