
ಚಂಡೀಗಢ: ಹರಿಯಾಣ ಪೊಲೀಸ್ ಅಧಿಕಾರಿ ಸಂದೀಪ್ ಕುಮಾರ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ರೋಹ್ಟಕ್ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್‌ನಲ್ಲಿ ಐಪಿಎಸ್ ಅಧಿಕಾರಿ ವೈ ಪುರಣ್ ಕುಮಾರ್ ಅವರ ಗನ್‌ಮ್ಯಾನ್ ಸುಶೀಲ್, ಕುಮಾರ್ ಅವರ ಪತ್ನಿ ಪಿ ಅವನೀತ್ ಕೌರ್, ಬಟಿಂಡಾ ಗ್ರಾಮಾಂತರ ಶಾಸಕ ಅಮಿತ್ ರತ್ನ ಮತ್ತು ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಾಗಿದೆ.
ಸದ್ಯ ನಡೆಯುತ್ತಿರುವ ತನಿಖೆಗಳನ್ನು ಉಲ್ಲೇಖಿಸಿ ಅಧಿಕಾರಿಗಳು ಎಫ್‌ಐಆರ್ ಪ್ರತಿಯನ್ನು ನೀಡಲು ನಿರಾಕರಿಸಿದ್ದಾರೆ. ಹರಿಯಾಣದಲ್ಲಿ ಸಾರ್ವಜನಿಕ ಮತ್ತು ರಾಜಕೀಯವಾಗಿ ಗಮನ ಸೆಳೆದಿರುವ ಪ್ರಕರಣದಲ್ಲಿ ಎಫ್‌ಐಆರ್ ದಾಖಲು ಮಹತ್ವದ ಬೆಳವಣಿಗೆಯಾಗಿದೆ.
ಆರೋಪಿಗಳ ವಿರುದ್ಧದ ನಿರ್ದಿಷ್ಟ ಆರೋಪಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಪ್ರಸ್ತುತ ತನಿಖೆ ನಡೆಯುತ್ತಿದೆ. ತನಿಖೆ ಮುಂದುವರೆದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಈ ಮಧ್ಯೆ ಎಎಸ್‌ಐ ಸಂದೀಪ್ ಕುಮಾರ್ ಅವರ ಮರಣೋತ್ತರ ಪರೀಕ್ಷೆಯನ್ನು ನಾಳೆ ಬೆಳಿಗ್ಗೆ 8 ಗಂಟೆಗೆ ನಿಗದಿಪಡಿಸಲಾಗಿದೆ. ತದನಂತರ ರೋಹ್ಟಕ್‌ನಲ್ಲಿರುವ ಸ್ಥಳೀಯ ಸ್ಮಶಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆಯನ್ನು ಯೋಜಿಸಲಾಗಿದೆ.
ಕೊಲೆ ಪ್ರಕರಣದಿಂದ ತನ್ನ ಹೆಸರನ್ನು ತೆಗೆದುಹಾಕಲು ಕುಖ್ಯಾತ ದರೋಡೆಕೋರ ರಾವ್ ಇಂದ್ರಜಿತ್ ಜೊತೆಗೆ ಕುಮಾರ್ ರೂ. 50 ಕೋಟಿ ಡೀಲ್ ಮಾಡಿಕೊಂಡಿದ್ದರು ಎಂದು ಸಂದೀಪ್ ಕುಮಾರ್ ಲಾಥರ್ ತಮ್ಮ ಸೂಸೈಡ್ ನೋಟ್ ನಲ್ಲಿ ಆರೋಪಿಸಿದ್ದಾರೆ.
ಇಂದ್ರಜಿತ್ ಹರಿಯಾಣದಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಭಾರತದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಸ್ತುತ ಯುಎಸ್‌ನಲ್ಲಿದ್ದಾರೆ. ಇತ್ತೀಚೆಗೆ ಹರಿಯಾಣದಲ್ಲಿ ನಡೆದ ಎರಡು ಪ್ರಮುಖ ಘಟನೆಗಳಲ್ಲಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಅವರು ಜೆಮ್ಸ್ ಮ್ಯೂಸಿಕ್ ಲೇಬಲ್ ಹೊಂದಿದ್ದು, ಹಿಮಾಂಶು ಭಾವು ಗ್ಯಾಂಗ್ ಪರವಾಗಿ ಕೆಲಸ ಮಾಡ್ತಾರೆ. ರೋಹ್ಟಕ್‌ನಲ್ಲಿ ಫೈನಾನ್ಷಿಯರ್ ಮಂಜೀತ್ ಹತ್ಯೆಗೆ ಇಂದರ್‌ಜಿತ್ ಸಂಚು ರೂಪಿಸಿದ್ದ ಎನ್ನಲಾಗಿದೆ.
ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ಮನೆಗೆ ಗುಂಡಿನ ದಾಳಿ ಮತ್ತು ಹರ್ಯಾನ್ವಿ ರಾಪರ್-ಗಾಯಕ ರಾಹುಲ್ ಯಾದವ್ ಅಲಿಯಾಸ್ ಫಾಜಿಲ್ ಪುರಿಯಾ ಅವರ ಮೇಲಿನ ದಾಳಿಯಲ್ಲೂ ಇಂದ್ರಜಿತ್ ಹೆಸರು ಕೇಳಿಬಂದಿದೆ.
Advertisement