
ಚಂಡೀಗಢ: ಭ್ರಷ್ಟಾಚಾರ ಮತ್ತು ಜಾತಿ ಶೋಷಣೆ ಆರೋಪಗಳ ನಡುವೆ ಹರಿಯಾಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಐಪಿಎಸ್ ಅಧಿಕಾರಿ ವೈ ಪುರಾಣ್ ಕುಮಾರ್ ಅವರ ಡೆತ್ ನೋಟ್ ನಲ್ಲಿ ಸಾಕಷ್ಟು ಅನುಮಾನಗಳಿದ್ದವು. ತದನಂತರ ಮತ್ತೋರ್ವ ಪೊಲೀಸ್ ಅಧಿಕಾರಿಯ ಡೆತ್ ನೋಟ್ ನಲ್ಲಿ ಭ್ರಷ್ಟಾಚಾರ ಮತ್ತು ಪೊಲೀಸ್- ಗ್ಯಾಂಗ್ ಸ್ಟರ್ ನಂಟಿನ ಬಗ್ಗೆ ಆಘಾತಕಾರಿ ಅಂಶ ಬಯಲಾಗಿದೆ.
ಮರ್ಡರ್ ಕೇಸ್ ನಲ್ಲಿ ಗ್ಯಾಂಗ್ ಸ್ಟರ್ ರಾವ್ ಇಂದ್ರಜಿತ್ ಹೆಸರು ತೆಗೆದುಹಾಕಲು ರೂ. 50 ಕೋಟಿ ಒಪ್ಪಂದಕ್ಕೆ ಕುಮಾರ್ ಸಹಿ ಹಾಕಿದ್ದರು ಎಂದು ಸಹಾಯಕ ಸಬ್ ಇನ್ಸ್ ಪೆಕ್ಟರ್ ಸಂದೀಪ್ ಲಾಥರ್ ಬರೆದಿರುವ ಸೂಸೈಡ್ ನೋಟ್ ನಲ್ಲಿ ಆರೋಪಿಸಿದ್ದಾರೆ. ಇದು ಭಾರಿ ಕೌತುಕ ಹುಟ್ಟಿಸಿದೆ.
ಎರಡು ಸೂಸೈಡ್ ನೋಟ್ ಗಳು: ವೈ ಪುರಾಣ್ ಕುಮಾರ್ ಅಕ್ಟೋಬರ್ 7 ರಂದು ಚಂಡೀಗಢದ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಎಂಟು ಪುಟಗಳ ಸೂಸೈಡ್ ನೋಟ್ ನಲ್ಲಿ 10 ಹಿರಿಯ ಮತ್ತು ನಿವೃತ್ತ ಅಧಿಕಾರಿಗಳಿಂದ ಜಾತಿ ಆಧಾರಿತ ತಾರತಮ್ಯ, ಮಾನಸಿಕ ಕಿರುಕುಳ, ಸಾರ್ವಜನಿಕ ಅವಮಾನ ಹಾಗೂ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಅವರು ಆರೋಪಿಸಿದ್ದರು.
ಆದಾದ ಒಂದು ವಾರದ ನಂತರ, ಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದೀಪ್ ಲಾಥರ್ ರೋಹ್ಟಕ್‌ನ ಮೈದಾನದಲ್ಲಿ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮೂರು ಪುಟಗಳ ಸೂಸೈಡ್ ನೋಟ್ ನಲ್ಲಿ ಕುಮಾರ್ ಒಬ್ಬ "ಭ್ರಷ್ಟ ಪೋಲೀಸ್" ಅಧಿಕಾರಿಯಾಗಿದ್ದರು. ಎಲ್ಲರಿಗೂ ಗೊತ್ತಾಗಿಬಿಡುತ್ತದೆ ಎಂಬ ಭಯದಿಂದ ಅವರು ಆತ್ಮಹತ್ಯೆಗೆ ಶರಣಾಗಿರುವುದಾಗಿ ಉಲ್ಲೇಖಿಸಿದ್ದರು.
ರಾವ್ ಇಂದ್ರಜಿತ್ ಯಾರು? ಕೊಲೆ ಪ್ರಕರಣದಿಂದ ತನ್ನ ಹೆಸರನ್ನು ತೆಗೆದುಹಾಕಲು ಕುಖ್ಯಾತ ದರೋಡೆಕೋರ ರಾವ್ ಇಂದ್ರಜಿತ್ ಜೊತೆಗೆ ಕುಮಾರ್ ರೂ. 50 ಕೋಟಿ ಡೀಲ್ ಮಾಡಿಕೊಂಡಿದ್ದರು ಎಂದು ಲಾಥರ್ ತಮ್ಮ ಸೂಸೈಡ್ ನೋಟ್ ನಲ್ಲಿ ಆರೋಪಿಸಿದ್ದಾರೆ. ಇಂದ್ರಜಿತ್ ಹರಿಯಾಣದಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಭಾರತದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಸ್ತುತ ಯುಎಸ್‌ನಲ್ಲಿದ್ದಾರೆ.
ಇತ್ತೀಚೆಗೆ ಹರಿಯಾಣದಲ್ಲಿ ನಡೆದ ಎರಡು ಪ್ರಮುಖ ಘಟನೆಗಳಲ್ಲಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಅವರು ಜೆಮ್ಸ್ ಮ್ಯೂಸಿಕ್ ಲೇಬಲ್ ಹೊಂದಿದ್ದು, ಹಿಮಾಂಶು ಭಾವು ಗ್ಯಾಂಗ್ ಪರವಾಗಿ ಕೆಲಸ ಮಾಡ್ತಾರೆ. ರೋಹ್ಟಕ್‌ನಲ್ಲಿ ಫೈನಾನ್ಷಿಯರ್ ಮಂಜೀತ್ ಹತ್ಯೆಗೆ ಇಂದರ್‌ಜಿತ್ ಸಂಚು ರೂಪಿಸಿದ್ದ ಎನ್ನಲಾಗಿದೆ. ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ಮನೆಗೆ ಗುಂಡಿನ ದಾಳಿ ಮತ್ತು ಹರ್ಯಾನ್ವಿ ರಾಪರ್-ಗಾಯಕ ರಾಹುಲ್ ಯಾದವ್ ಅಲಿಯಾಸ್ ಫಾಜಿಲ್ ಪುರಿಯಾ ಅವರ ಮೇಲಿನ ದಾಳಿಯಲ್ಲೂ ಇಂದ್ರಜಿತ್ ಹೆಸರು ಕೇಳಿಬಂದಿದೆ.
Advertisement