
ನವದೆಹಲಿ: ರಜೆಯಿಂದ ಕರ್ತವ್ಯಕ್ಕೆ ಮರಳುತ್ತಿದ್ದ ಭಾರತೀಯ ಸೇನೆಯ ಆಂಬ್ಯುಲೆನ್ಸ್ ಸಹಾಯಕರೊಬ್ಬರು ರೈಲಿನಲ್ಲಿ ಎಂಟು ತಿಂಗಳ ಶಿಶುವಿಗೆ ಬಾಯಿಯಿಂದ ಬಾಯಿಗೆ ರೆಸಸಿಟೇಶನ್ ನಡೆಸಿ ಜೀವ ಉಳಿಸಿದ್ದಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಈಶಾನ್ಯದಲ್ಲಿರುವ ಸೇನೆಯ ಫೀಲ್ಡ್ ಆಸ್ಪತ್ರೆಯಲ್ಲಿ ನಿಯೋಜಿತರಾಗಿರುವ ಸಿಪಾಯಿ ಸುನಿಲ್, ನವದೆಹಲಿ-ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಗುವಿಗೆ ಕಾರ್ಡಿಯೋ-ಪಲ್ಮನರಿ ರೆಸಸಿಟೇಶನ್(ಸಿಪಿಆರ್) ಮಾಡಿ ಮಗುವಿನ ಜೀವ ಉಳಿಸಿದರು ಎಂದು ಅವರು ಹೇಳಿದ್ದಾರೆ.
"ತಕ್ಷಣದ ವೈದ್ಯಕೀಯ ನೆರವು ಲಭ್ಯವಿಲ್ಲದ ಪರಿಸ್ಥಿತಿಯಲ್ಲಿ ಅವರ ಸಕಾಲಿಕ ಮತ್ತು ವೃತ್ತಿಪರ ಕ್ರಮವು ಮಗುವಿನ ಜೀವ ಉಳಿಸಿತು" ಎಂದು ರಕ್ಷಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಎಂಟು ತಿಂಗಳ ಶಿಶುವಿಗೆ ಹಠಾತ್ ಉಸಿರಾಟದ ತೊಂದರೆ ಉಂಟಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಮಗು ಮೃತಪಟ್ಟಿದೆ ಎಂದು ಭಾವಿಸಿ ಮಗುವಿನ ತಾಯಿ ಮೂರ್ಛೆ ಹೋದರು. ಅಲ್ಲದೆ ಇತರ ಕುಟುಂಬ ಸದಸ್ಯರು ಭಯಭೀತರಾಗಿದ್ದರು. ಆದರೆ ಅದೇ ಬೋಗಿಯಲ್ಲಿದ್ದ 456 ಫೀಲ್ಡ್ ಆಸ್ಪತ್ರೆಯಲ್ಲಿ ನಿಯೋಜಿತರಾಗಿರುವ ಸಿಪಾಯಿ(ಆಂಬ್ಯುಲೆನ್ಸ್ ಸಹಾಯಕ) ಸುನಿಲ್ ಅವರು ತಕ್ಷಣ ಅವರ ಸಹಾಯಕ್ಕೆ ಧಾವಿಸಿದರು ಮತ್ತು ಮಗುವನ್ನು ಪರೀಕ್ಷಿಸಿದರು ಎಂದು ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
"ಸುನಿಲ್ ತಕ್ಷಣವೇ ಎದೆಯ ಮೇಲೆ ಎರಡು ಬೆರಳುಗಳನ್ನು ಬಳಸಿ ಮಕ್ಕಳ ಹೃದಯ-ಶ್ವಾಸಕೋಶದ ರೆಸಸಿಟೇಶನ್ ಮಾಡಿದರು ಮತ್ತು ಮಗುವಿಗೆ ಬಾಯಿಯಿಂದ ಬಾಯಿಗೆ ಉಸಿರಾಟವನ್ನು ನೀಡಿದರು. ಮಾರು ಎರಡು ಬಾರಿ CPR ಮಾಡಿದ ನಂತರ ಮಗು ಎಚ್ಚರಗೊಂಡಿತು" ಎಂದು ಅವರು ಹೇಳಿದ್ದಾರೆ.
Advertisement