
ಪುಣೆ: ಮರಾಠ ಸಾಮ್ರಾಜ್ಯದ ಪ್ರಸಿದ್ಧ ಐತಿಹಾಸಿಕ ಕೋಟೆ ಶನಿವಾರ ವಾಡದಲ್ಲಿ ಮುಸ್ಲಿಂ ಮಹಿಳೆಯರು ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿಂದೂ ಪರ ಸಂಘಟನೆಗಳು ಭಾನುವಾರ ಪುಣೆಯಲ್ಲಿ ಪ್ರತಿಭಟನೆ ನಡೆಸಿದವು.
ಬಿಜೆಪಿ ರಾಜ್ಯಸಭಾ ಸದಸ್ಯೆ ಮೇಧಾ ಕುಲಕರ್ಣಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಧಾ ಕುಲಕರ್ಣಿ, ಇದು ದುರದೃಷ್ಟಕರವಾಗಿದ್ದು, ಶನಿವಾರ ವಾಡಾ ನಮಾಜ್ ಮಾಡುವ ಸ್ಥಳವಲ್ಲ. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಆಡಳಿತವನ್ನು ಒತ್ತಾಯಿಸುತ್ತೇವೆ" ಎಂದು ಹೇಳಿದರು.
ನಮಾಜ್ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಈ ವಿಚಾರದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಾತಿತ್ ಪವನ್ ಸಂಘಟನಾ, ಹಿಂದೂ ಸಕಲ ಸಮಾಜ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಪ್ರತಿಭಟನಾಕಾರರು ಸ್ಥಳದಲ್ಲಿ ಗೋಮೂತ್ರವನ್ನು ಸಿಂಪಡಿಸಿದರು. ನಮಾಜ್ ನಡೆದ ಸ್ಥಳವನ್ನು ಶುದ್ದೀಕರಿಸುವ ಪ್ರಯತ್ನವಾಗಿ ಶಿವ ವಂದನಾ ಪ್ರಾರ್ಥನೆ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಉಪ ಪೊಲೀಸ್ ಆಯುಕ್ತ ಕೃಶಿಕೇಶ್ ರಾವಾಲೆ, ಈ ಸ್ಥಳವು ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟಿದೆ. ಎಎಸ್‌ಐ ಜೊತೆಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
Advertisement