
ಮುಂಬೈ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಕೇಂದ್ರ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು, ತಾವು ಸ್ವೀಕರಿಸಿದ ಮಾಹಿತಿಯ ಪ್ರಕಾರ 96 ಲಕ್ಷ ನಕಲಿ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಸೋಮವಾರ ಆರೋಪಿಸಿದ್ದಾರೆ.
ನಕಲಿ ಮತದಾರರನ್ನು ತೆಗೆದು ಹಾಕುವವರೆಗೆ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಸದಂತೆ ಎಂಎನ್‌ಎಸ್ ಮುಖ್ಯಸ್ಥರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಭಾನುವಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಂಎನ್‌ಎಸ್ ಮುಖ್ಯಸ್ಥರು, "9.6 ಮಿಲಿಯನ್(96 ಲಕ್ಷ) ನಕಲಿ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿ ಇದೀಗ ಬಂದಿದೆ. ಇದು ಮಹಾರಾಷ್ಟ್ರ ಮತ್ತು ದೇಶದ ಮತದಾರರಿಗೆ ಮಾಡಿದ ಅವಮಾನ" ಎಂದು ಹೇಳಿದ್ದರು.
"ಎಲ್ಲಾ ಗ್ರೂಪ್ ಅಧ್ಯಕ್ಷರು(ಗುಂಪು ಅಧ್ಯಕ್ಷರು), ಶಾಖೆಯ ಅಧ್ಯಕ್ಷರು ಮತ್ತು ಚುನಾವಣಾ ಪಟ್ಟಿಯ ಮುಖ್ಯಸ್ಥರು ಮನೆ ಮನೆಗೆ ಹೋಗಿ ಮತಗಳನ್ನು ಎಣಿಸಬೇಕು. ಮತದಾರರ ಪಟ್ಟಿ ಶುದ್ಧವಾಗುವವರೆಗೆ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಸದಂತೆ ನಾನು ಚುನಾವಣಾ ಆಯೋಗವನ್ನುಒತ್ತಾಯಿಸುತ್ತಿದ್ದೇನೆ" ಎಂದು ಠಾಕ್ರೆ ಹೇಳಿದ್ದಾರೆ.
ಏತನ್ಮಧ್ಯೆ, ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವತ್, ರಾಜ್ ಠಾಕ್ರೆ ಅವರ ಹೇಳಿಕೆಯನ್ನು ಬೆಂಬಲಿಸಿದ್ದು, ನಕಲಿ ಮತದಾರರ ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ರಾವತ್, "ನಾವು ಬಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಂದಿಗೂ ಹೇಳಿಲ್ಲ. ಮೊದಲು ಮತದಾರರ ಪಟ್ಟಿಯನ್ನು ಸರಿಪಡಿಸಬೇಕು ಎಂದು ಹೇಳಿದ್ದೇವೆ. ರಾಜ್ ಠಾಕ್ರೆ ಪ್ರಕಾರ, ಪಟ್ಟಿಯಲ್ಲಿ 9.6 ಮಿಲಿಯನ್ ನಕಲಿ ಮತದಾರರಿದ್ದಾರೆ" ಎಂದು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದರು.
"ನವೆಂಬರ್ 1 ರಂದು, ನಕಲಿ ಮತದಾರರ ವಿರುದ್ಧ ಎಲ್ಲಾ ವಿರೋಧ ಪಕ್ಷಗಳು ನಡೆಸುವ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ" ಎಂದು ಅವರು ತಿಳಿಸಿದ್ದಾರೆ.
Advertisement