
ನವದೆಹಲಿ: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಮುಂದುವರೆಸಲು ಸುಪ್ರೀಂ ಕೋರ್ಟ್ ಕೊನೆಗೂ ಸಮ್ಮತಿ ಸೂಚಿಸಿದೆ.
ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಚುನಾವಣಾ ಆಯೋಗದ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಸ್ಪೆಷಲ್ ಇಂಟೆನ್ಸಿವ್ ರಿವಿಜನ್) ನಡೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಅಕ್ರಮ ವಲಸಿಗರ ಸಮಸ್ಯೆಗಳ ನಡುವೆಯೇ ನಕಲಿ ಮತದಾರರ ಹಾವಳಿ ತಡೆಗಟ್ಟಲು ಚುನಾವಣಾ ಆಯೋಗ ಈ ಮಹತ್ವದ ಕ್ರಮಕ್ಕೆ ಮುಂದಾಗಿತ್ತು. ಆದರೆ ಈ ವಿಚಾರವಾಗಿ ವಿಪಕ್ಷಗಳು ಮತ್ತು ಇತರೆ ಸಂಸ್ಥೆಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ವಿಪಕ್ಷಗಳ ವಿರೋಧ
ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಆರ್‌ಜೆಡಿ ಸಂಸದ ಮನೋಜ್ ಝಾ, ಸಮಾಜವಾದಿ ಪಕ್ಷದ ಹರಿಂದರ್ ಸಿಂಗ್ ಮಲಿಕ್, ಶಿವಸೇನಾ (ಯುಬಿಟಿ) ನಾಯಕ ಅರವಿಂದ್ ಸಾವಂತ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಅನೇಕರು ಆಯೋಗದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದಲ್ಲಿ ಆಯೋಗದ ಪರ ರಾಕೇಶ್ ದ್ವಿವೇದಿ ಜತೆಗೆ, ಹಿರಿಯ ವಕೀಲರಾದ ಕೆ.ಕೆ.ವೇಣುಗೋಪಾಲ್ ಮತ್ತು ಮಣಿಂದರ್ ಸಿಂಗ್ ಅವರು ಚುನಾವಣಾ ಆಯೋಗದ ಪರವಾಗಿ ವಾದ ಮಂಡಿಸುತ್ತಿದ್ದಾರೆ.
ಅದರಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಇಂದು ವಿಚಾರಣೆ ನಡೆಸಿತು. ಇದೀಗ ಈ ಪ್ರಕರಣದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯನ್ನುಮಾಡುವುದನ್ನು ಮುಂದುವರಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದೆ.
ಸಾಂವಿಧಾನಿಕ ಸಂಸ್ಥೆಯ ತಡೆಯಲು ಸಾಧ್ಯವಿಲ್ಲ
ನಾವು ಸಾಂವಿಧಾನಿಕ ಸಂಸ್ಥೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, 'ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ನ್ಯಾಯದ ಹಿತದೃಷ್ಟಿಯಿಂದ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಪರಿಗಣಿಸಬೇಕು' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆಧಾರ್ ಕಾರ್ಡ್ ಪರಿಗಣನೆಗೆ ಏಕಿಲ್ಲ?
ಅಂತೆಯೇ ಇದಕ್ಕೂ ಮುನ್ನ ಮತದಾರರ ಪಟ್ಟಿಯ ಪರಿಷ್ಕರಣೆಗೆ ಆಧಾರ್ ಕಾರ್ಡ್ ಅನ್ನು ಏಕೆ ಪರಿಗಣಿಸುತ್ತಿಲ್ಲ ಎಂದು ನ್ಯಾಯಪೀಠ ಚುನಾವಣಾ ಆಯೋಗವನ್ನು ಪ್ರಶ್ನಿಸಿತ್ತು. ಈ ಕುರಿತು ಚುನಾವಣಾ ಆಯೋಗದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ‘ಆಧಾರ್ ಕಾರ್ಡ್ ಅನ್ನು ಪೌರತ್ವಕ್ಕೆ ಪುರಾವೆಯಾಗಿ ಪರಿಗಣಿಸುತ್ತಿಲ್ಲ. ಹಾಗೆಯೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಆಕ್ಷೇಪಣೆ ಹೊಂದಿರುವುದಾಗಿ’ ತಿಳಿಸಿದ್ದರು.
ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣ, ‘ಬಿಹಾರದಲ್ಲಿ ಸುಮಾರು 8 ಕೋಟಿ ಮತದಾರರಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆಗೆ ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಅನುಮತಿ ನೀಡಬಹುದಿತ್ತು. ಸದ್ಯ ಚುನಾವಣಾ ಆಯೋಗದ ಅಧಿಕಾರಿಗಳು ಆಧಾರ್ ಕಾರ್ಡ್ ಮತ್ತು ಮತದಾರ ಗುರುತಿನ ಚೀಟಿಯನ್ನು ದಾಖಲೆಯಾಗಿ ಸ್ವೀಕರಿಸುತ್ತಿಲ್ಲ' ಎಂದಿದ್ದಾರೆ.
ಅಲ್ಲದೆ ಜೂನ್ 24ರಂದು ಚುನಾವಣಾ ಆಯೋಗ ಹೊರಡಿಸಿರುವ ಆದೇಶವು ಸಂವಿಧಾನದ 14, 21, 325 ಮತ್ತು 326ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. 1950ರ ಜನ ಪ್ರಾತಿನಿಧ್ಯ ಕಾಯ್ದೆ ಮತ್ತು 1960ರ ಮತದಾರರ ನೋಂದಣಿ ನಿಯಮಗಳ ನಿಯಮ 21ಎ ನಿಬಂಧನೆಯನ್ನೂ ಉಲ್ಲಂಘಿಸುತ್ತದೆ ಎಂದು ಅರ್ಜಿಗಳಲ್ಲಿ ವಾದಿಸಲಾಗಿದೆ.
ಇದೀಗ ಬಿಹಾರದಲ್ಲಿ ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವ ತನ್ನ ಕಾರ್ಯವನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದೆ.
ದಾಖಲೆಗಳ ಸೇರ್ಪಡೆಗೆ ಅವಕಾಶ
ನ್ಯಾಯದ ಹಿತದೃಷ್ಟಿಯಿಂದ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಸಮಯದಲ್ಲಿ ಚುನಾವಣಾ ಆಯೋಗವು ಆಧಾರ್, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಸೇರಿಸುವುದನ್ನು ಪರಿಗಣಿಸುವುದು ಪ್ರಾಥಮಿಕ ಅಭಿಪ್ರಾಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಜುಲೈ 28 ರಂದು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ ಮತ್ತು ಒಂದು ವಾರದೊಳಗೆ ತನ್ನ ಅಫಿಡವಿಟ್ ಸಲ್ಲಿಸುವಂತೆ ಚುನಾವಣಾ ಸಮಿತಿಗೆ ಸೂಚಿಸಿದೆ.
Advertisement