
ಹೈದರಾಬಾದ್: ನವೆಂಬರ್ 11 ರಂದು ನಡೆಯಲಿರುವ ಹೈದರಾಬಾದಿನ ಜುಬಿಲಿ ಹಿಲ್ಸ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನವೀನ್ ಯಾದವ್ ಅವರನ್ನು ಪಕ್ಷ ಬೆಂಬಲಿಸಲಿದೆ ಎಂದು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಫಲಿತಾಂಶವು ಹಾಲಿ ಸರ್ಕಾರವನ್ನು ಬೀಳಿಸಲು ಅಥವಾ ಹೊಸ ಸರ್ಕಾರ ತರಲು ಸಾಧ್ಯವಿಲ್ಲ. ನವೀನ್ ಯಾದವರ ನೇತೃತ್ವದಲ್ಲಿ ಅಭಿವೃದ್ಧಿ ಸಾಧ್ಯ ಇರುವುದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿರುವುದಾಗಿ ತಿಳಿಸಿದರು.
ಚುನಾವಣೆ ಫಲಿತಾಂಶದಿಂದ ಸರ್ಕಾರ ಬದಲಾಗುವುದಿಲ್ಲ ಎಂಬುದು ನಮ್ಮ ಜುಬಿಲಿ ಹಿಲ್ಸ್ ಜನರಲ್ಲಿ ನಮ್ಮ ಮನವಿಯಾಗಿದೆ. ಈಗ ಜುಬಿಲಿ ಹಿಲ್ಸ್‌ನಲ್ಲಿ ಅಭಿವೃದ್ಧಿ ಮಾಡಬಲ್ಲ ಯುವ ನವೀನ್ ಯಾದವ್‌ಗೆ ಮತ ನೀಡಿ ಎಂದು ಕಳೆದ ಹತ್ತು ವರ್ಷಗಳಿಂದ ಬಿಆರ್‌ಎಸ್ ಬೆಂಬಲಿಸಿದ ಸುಮಾರು ನಾಲ್ಕು ಲಕ್ಷ ಮತದಾರರಲ್ಲಿ ನಾವು ಮನವಿ ಮಾಡುತ್ತೇವೆ ಎಂದರು.
ಕಳೆದ ಹತ್ತು ವರ್ಷಗಳಿಂದ ಬಿಆರ್‌ಎಸ್ ಪಕ್ಷ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಯಾವುದೇ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಓವೈಸಿ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎಐಎಂಐಎಂ ವಿಭಿನ್ನ ತಂತ್ರವನ್ನು ಅನುಸರಿಸಬಹುದು ಎಂಬ ಸುಳಿವು ನೀಡಿದರು.
ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನವೆಂಬರ್ 11 ರಂದು ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಈ ವರ್ಷದ ಜೂನ್‌ನಲ್ಲಿ ಬಿಆರ್‌ಎಸ್ ಶಾಸಕ ಮಾಗಂಟಿ ಗೋಪಿನಾಥ್ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು.
Advertisement