
ಬಿಹಾರ: ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷ ಇಂಡಿಯಾ ಬಣವು ಹಿರಿಯ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಯಿದೆ.
ಅಶೋಕ್ ಗೆಹ್ಲೋಟ್ ಮತ್ತು ಕೃಷ್ಣ ಅಲ್ಲಾವರು ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಹಾಗೂ ತೇಜಸ್ವಿ ಯಾದವ್ ಅವರ ನಡುವೆ ಬುಧವಾರ ನಡೆದ ಮುಚ್ಚಿದ ಬಾಗಿಲಿನ ಸಭೆಯಲ್ಲಿ ವಿರೋಧ ಪಕ್ಷದ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ವಿಷಯವನ್ನು ಪ್ರಸ್ತಾಪಿಸಲಾಗಿದೆ ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ.
ತೇಜಸ್ವಿ ಅವರನ್ನು ಇಂಡಿಯಾ ಬಣಕ್ಕೆ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ ಬಗ್ಗೆ ಗೆಹ್ಲೋಟ್ ಯಾವುದೇ ನೇರ ಪ್ರತಿಕ್ರಿಯೆ ನೀಡಲಿಲ್ಲ, ಗುರುವಾರ ನಡೆಯಲಿರುವ ಮೈತ್ರಿಕೂಟದ ಪಾಲುದಾರರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಲ್ಲಾ ಗೊಂದಲಗಳನ್ನು ನಿವಾರಿಸಲಾಗುವುದು ಎಂದು ಅವರು ಹೇಳಿದರು. ಆದಾಗ್ಯೂ, ಇಂಡಿಯಾ ಬಣದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅವರು ಹೇಳಿದ್ದಾರೆ.
ಆರ್‌ಜೆಡಿ ವರಿಷ್ಠರೊಂದಿಗಿನ ಸಭೆಯನ್ನು 'ಫಲಪ್ರದ' ಎಂದು ಅವರು ಬಣ್ಣಿಸಿದರು ಜೊತೆಗೆ ವಿರೋಧ ಪಕ್ಷಗಳ ಮೈತ್ರಿಕೂಟವು ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲಿದೆ ಎಂದು ವಿವರಿಸಿದ್ದಾರೆ.
ಸಿಪಿಐ-ಎಂಎಲ್ (ಲಿಬರೇಷನ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಅವರು ವಿರೋಧ ಪಕ್ಷದ ಬಣದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಅವರ ಆಯ್ಕೆ ಎಂದು ಸ್ಪಷ್ಟವಾಗಿ ಹೇಳಿದರು. ವಿರೋಧಿ ಪಕ್ಷದ ಬಣದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಅವರ ಹೆಸರನ್ನು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಬಹುದು" ಎಂದು ಭಟ್ಟಾಚಾರ್ಯ ಹೇಳಿದರು.
ವಿರೋಧಿ ಪಕ್ಷದ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಹೆಸರು ಘೋಷಿಸುವ ಬಗ್ಗೆ ಕಾಂಗ್ರೆಸ್ ಮೌನ ವಹಿಸಿದೆ. ಮುಂಬರುವ ಚುನಾವಣೆಯಲ್ಲಿ ಇಂಡಿಯಾ ಬಣಕ್ಕೆ ಬಹುಮತ ಬಂದರೆ ತೇಜಸ್ವಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಕಾಂಗ್ರೆಸ್ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.
Advertisement