'ಬಿಹಾರ ಚುನಾವಣೆಗಾಗಿ ಅಧಿಕಾರಿಗಳಿಂದ ಹಣ ವಸೂಲಿ'; BJP-ಕಾಂಗ್ರೆಸ್ ನಡುವೆ ವಾಕ್ಸಮರ

ರಾಜ್ಯ ಬಿಜೆಪಿಯ ಸುಳ್ಳಿನ ಕಾರ್ಖಾನೆ ಮತ್ತೆ ಓವರ್‌ಟೈಮ್ ಕೆಲಸ ಮಾಡುತ್ತಿದೆ. ಬಿಹಾರ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿದೆ ಎಂಬ ನಿಮ್ಮ ಕಪೋಲಕಲ್ಪಿತ ಆರೋಪ ಹಾಸ್ಯಾಸ್ಪದ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಿಹಾರದಲ್ಲಿ ಚುನಾವಣಾ ಪ್ರಚಾರ ಚುರುಕುಗೊಳ್ಳುತ್ತಿದ್ದಂತೆ, ಇತ್ತ ಚುನಾವಣೆಗಾಗಿ ಅಧಿಕಾರಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪ ಸಂಬಂಧ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ಬಿಜೆಪಿ ನಾಯಕರು ವಿರುದ್ಧ ವಾಕ್ಸಮರ ಶುರುವಾಗಿದೆ.

ಕರ್ನಾಟಕವನ್ನು ಕಾಂಗ್ರೆಸ್‌ ಹೈಕಮಾಂಡ್‌ಗೆ, ರಾಹುಲ್‌ ಗಾಂಧಿಗೆ ಎಟಿಎಂ ಮಾಡಿಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರದ ಎರಡೂವರೆ ವರ್ಷಗಳ ಸಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ತುಘಲಕ್ ಸರಕಾರ ನಡೆಯುತ್ತಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಯಾವ ರೀತಿ ಚರ್ಚೆ ನಡೆಯುತ್ತಿದೆ? ಮೊನ್ನೆ ದಿನ ನಮ್ಮ ಸಂಸದ ರಾಘವೇಂದ್ರ ಅವರು ಇಲ್ಲಿ ಹಣ ಸಂಗ್ರಹಿಸಿ ಬಿಹಾರ ಚುನಾವಣೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಚಿವರಾದಿಯಾಗಿ ಎಲ್ಲರೂ ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ. ಯಾಕೆ ಸ್ವಾಮೀ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮರೆತು ಹೋಯಿತೇ ಎಂದು ಪ್ರಶ್ನಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಹಣವನ್ನು ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿ ಸಾವಿರಾರು ಬೇನಾಮಿ ಖಾತೆ ತೆರೆದು ಹಣ ಪಡೆದು ಚಿನ್ನ ಖರೀದಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲೂ ಬಳಸಲಾಗಿತ್ತು. ಇದನ್ನು ಜಾರಿ ನಿರ್ದೇಶನಾಲಯವು (ಇ.ಡಿ) ನೇರವಾಗಿ ಹೇಳಿದೆ. ಬೃಹತ್ ನೀರಾವರಿ, ನೀರಾವರಿ ಇಲಾಖೆಯಲ್ಲಿ ಶೇ 60, 70ರಷ್ಟು ಕಮಿಷನ್ ಕೇಳುವ ಕುರಿತು ಗುತ್ತಿಗೆದಾರರ ಸಂಘವು ಪತ್ರ ಬರೆದಿದೆ. ಅಧಿಕೃತ ದೂರು ನೀಡಲಿ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಅಧಿಕೃತ ಪತ್ರ ಬರೆದಿರುವಾಗ ಇನ್ಯಾವ ದೂರು ಬೇಕೆಂದು ಕೇಳಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ರಾಯರೆಡ್ಡಿ ಮಾಡಿರುವ ಆರೋಪಗಳು ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

File photo
ನಿಯಂತ್ರಣ ಹೇರಿದಷ್ಟೂ RSS ಎಂಬ ಮಹಾ ವೃಕ್ಷ ಮುಗಿಲೆತ್ತರಕ್ಕೆ ಬೆಳೆಯುತ್ತದೆ: ಬಿ.ವೈ ವಿಜಯೇಂದ್ರ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಇತರ ರಾಜ್ಯಗಳ ಚುನಾವಣೆಯಲ್ಲಿ ಪಕ್ಷಕ್ಕೆ ಹಣಕಾಸು ಒದಗಿಸುವ ಎಟಿಎಂ ಆಗಿ ಪರಿವರ್ತಿಸಿದೆ ಎಂದು ಆರೋಪಿಸಿದ್ದರು.

ಬಿಜೆಪಿ ನಾಯಕರ ಈ ಆರೋಪವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ರಾಮಲಿಂಗಾ ರೆಡ್ಡಿ ಮತ್ತು ಇತರ ಹಿರಿಯ ನಾಯಕರು ನಿರಾಕರಿಸಿದರು.

ಡಿಕೆ.ಶಿವಕುಮಾರ್ ಅವರು ಮಾತನಾಡಿ, ವಿಜಯೇಂದ್ರ ಮತ್ತು ರಾಘವೇಂದ್ರ, ಇತರ ಬಿಜೆಪಿ ನಾಯಕರು ಈ ಅಭ್ಯಾಸವನ್ನು ಹೊಂದಿದ್ದಾರೆ. ಹೀಗಾಗಯೇ ಈ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಬಳಿ ಏನಾದರೂ ಪುರಾವೆಗಳಿದ್ದರೆ, ಅವರು ಅದನ್ನು ಬಿಡುಗಡೆ ಮಾಡಲಿ. ರಾಘವೇಂದ್ರ ಎಂದರೆ ಸುಳ್ಳಿಗೆ ಸಮಾನಾರ್ಥಕವಾಗಬಾರದು. ಹಿಟ್ ಅಂಡ್ ರನ್ ಮಾಡುವ ಕೆಲವು ನಾಯಕರು ಇದ್ದಾರೆ. ರಾಘವೇಂದ್ರ ಕೂಡ ಅವರಂತೆ ಆಗಬಾರದು ಎಂದು ಹೇಳಿದರು.

ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ‘ರಾಜ್ಯ ಬಿಜೆಪಿಯ ಸುಳ್ಳಿನ ಕಾರ್ಖಾನೆ ಮತ್ತೆ ಓವರ್‌ಟೈಮ್ ಕೆಲಸ ಮಾಡುತ್ತಿದೆ. ಬಿಹಾರ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿದೆ ಎಂಬ ನಿಮ್ಮ ಕಪೋಲಕಲ್ಪಿತ ಆರೋಪ ಹಾಸ್ಯಾಸ್ಪದ. ನಿಮ್ಮ ಸುಳ್ಳಿನ ಸರಮಾಲೆಗೆ ಕೊನೆಯೇ ಇಲ್ಲವೇ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ಚುನಾವಣೆಗೆ ಅಕ್ರಮ ಭ್ರಷ್ಟಾಚಾರದ ಹಣವನ್ನು ಬಳಸುವುದು ನಿಮ್ಮ ಜಾಯಮಾನ, ಕಾಂಗ್ರೆಸ್‌ನದ್ದಲ್ಲ. 2008-2013 ಮತ್ತು 2019-2023ರ ಅವಧಿಗಳಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಚುನಾವಣೆಗಳು ನಡೆದವು. ಆಗ ಕರ್ನಾಟಕದ ಸಂಪತ್ತನ್ನು ಆ ಚುನಾವಣೆಗಳಿಗೆ ಕಳುಹಿಸಿರುವ ನಿಮಗೆ, ಜನತೆಯ ಮುಂದೆ ಉತ್ತರಿಸುವ ಧೈರ್ಯ ಇದೆಯೇ? ಎಂದು ಪ್ರಶ್ನಿಸಿದರು.

ಹಣದ ಹೊಳೆ ಹರಿಸಿ, ಶಾಸಕರನ್ನು ಕುದುರೆಗಳಂತೆ ಖರೀದಿಸಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ ‘ಆಪರೇಷನ್ ಕಮಲ’ದ ಪಿತಾಮಹರು ನೀವು. ಇಂದು ಶುದ್ಧ ಹಸ್ತರೆಂದು ಬಿಂಬಿಸಿಕೊಳ್ಳಲು ಹೊರಟಿರುವುದು ಅತಿದೊಡ್ಡ ಜೋಕ್. ಅಧಿಕಾರಕ್ಕಾಗಿ ನೀವು ಖರೀದಿಸಿದ ಕ್ರಿಮಿನಲ್ ಹಿನ್ನೆಲೆಯ ಶಾಸಕರನ್ನು ಕರ್ನಾಟಕ ಎಂದಿಗೂ ಮರೆಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com