
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಯಂತ್ರಣ ಹೇರಿದಷ್ಟೂ ಅದು ತನ್ನ ಸಂಘಟನೆಯ ಮಹಾ ವೃಕ್ಷವನ್ನು ವಿಸ್ತರಿಸುತ್ತಲೇ ಮುಗಿಲೆತ್ತರಕ್ಕೆ ಬೆಳೆಯುತ್ತದೆ. ರಾಷ್ಟ್ರಕಟ್ಟುವ ಕಾರ್ಯದಲ್ಲಿ ಎಂದಿನಂತೆ ಮುನ್ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗುರುವಾರ ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ ಆರ್.ಎಸ್ಎಸ್ ಚಟುವಟಿಕೆ ನಿಷೇಧದ ಧ್ವನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಪರೋಕ್ಷವಾಗಿ ಬೆಂಬಲ ನೀಡಿದ್ದು, ಸಂಘದ ಹೆಸರನ್ನು ಎತ್ತದೆಯೇ ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯುವ ನಿರ್ಧಾರ ಕೈಗೊಂಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ನಿರೀಕ್ಷೆಯಂತೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ, ಆರ್'ಎಸ್ಎಸ್ ಚಟುವಟಿಕೆಗಳನ್ನು ನಿಯಂತ್ರಿಸುವುದೇ ತನ್ನ ಆದ್ಯತೆ ಎಂಬಂತೆ ಖಾಸಗಿ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಚಟುವಟಿಕೆಗಳನ್ನು ಆಯೋಜಿಸಲು ಅನುಮತಿ ಕಡ್ಡಾಯಗೊಳಿಸುವ ನಿರ್ಧಾರವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
'ಪಾಕಿಸ್ತಾನ್ ಜಿಂದಾಬಾದ್' ಎಂದು ಕೂಗುವವರ ಮೇಲೆ ಈವರೆಗೂ ಯಾವ ಕ್ರಮಗಳನ್ನೂ ಜರುಗಿಸಲಿಲ್ಲ, ರಾಷ್ಟ್ರವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ PFI, KFD, SDPI ನಂತಹ ದೇಶವಿರೋಧಿ ಸಂಘಟನೆಗಳನ್ನು ನಿಷೇಧಿಸುವ ಮಾತಿರಲಿ, ಅವರ ಚಟುವಟಿಕೆಗಳ ಮೇಲೆ ಕನಿಷ್ಠ ನಿಯಂತ್ರಣ ಸಾಧಿಸುವ ಯಾವುದೇ ನಿರ್ಧಾರವನ್ನು ಕೈಗೊಳ್ಳಲಿಲ್ಲ.
ಸ್ವಾತಂತ್ರ್ಯಾ ನಂತರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮರ್ಪಣಾಪೂರ್ವಕ ಸೇವೆ ಹಾಗೂ ರಾಷ್ಟ್ರಭಕ್ತಿ ಮೂಡಿಸುವ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಾ ಬಂದಿದೆ, ಇದನ್ನು ಹತ್ತಿಕ್ಕಲು ಅಂದಿನಿಂದಲೂ ಇಂತಹ ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ, ಇದ್ಯಾವುದನ್ನೂ ಲೆಕ್ಕಿಸದ ಈ ದೇಶದ ಕೋಟ್ಯಂತರ ಜನರ ಬೆಂಬಲ ಹಾಗೂ ಆಶೀರ್ವಾದ ಪಡೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ತಪಸ್ವೀ ಕಾರ್ಯಶೀಲತೆಯಿಂದ ತನ್ನ ಸಂಘಟನಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಬರುವ ಅಡೆ-ತಡೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ.
ಕಾಂಗ್ರೆಸ್ ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಷಯವನ್ನು ಮುಂದಿಟ್ಟುಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಯಂತ್ರಣ ಹೇರಿದಷ್ಟೂ ಅದು ತನ್ನ ಸಂಘಟನೆಯ ಮಹಾ ವೃಕ್ಷವನ್ನು ವಿಸ್ತರಿಸುತ್ತಲೇ ಮುಗಿಲೆತ್ತರಕ್ಕೆ ಬೆಳೆಯುತ್ತದೆ. ರಾಷ್ಟ್ರಕಟ್ಟುವ ಕಾರ್ಯದಲ್ಲಿ ಎಂದಿನಂತೆ ಮುನ್ನಡೆಯಲಿದೆ ಎಂದು ಹೇಳಿದ್ದಾರೆ.
Advertisement