
ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಯವರ ಆರ್‌ಎಸ್‌ಎಸ್ ವಿರೋಧಿ ನಾಟಕ ನೋಡುತ್ತಿದ್ದರೆ, ಕಾಂಗ್ರೆಸ್ ಕ್ರಾಂತಿಯ ರೇಸ್ ನಲ್ಲಿ ಡಿಕೆ.ಶಿವಕುಮಾರ್ ಅವರನ್ನು ಓವರ್ ಟೇಕ್ ಮಾಡಿ ತಾವೇ ಸಿಎಂ ಹುದ್ದೆಗೆ ಏರುವ ಕನಸು ಕಾಣುತ್ತಿರುವಂತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಪ್ರಿಯಾಂಕ್ ಖರ್ಗೆ ಅವರನ್ನು ಉತ್ತರಾಧಿಕಾರಿ ಎಂದು ಬಿಂಬಿಸಲು ಸಿಎಂ ಸಿದ್ದರಾಮಯ್ಯ ಹೊಸ ನಾಟಕ ಆಡಿಸುತ್ತಿದ್ದಾರಾ? ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಮೇಲಿಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ ಎಸ್ಎಸ್ ವಿರುದ್ಧ ಪತ್ರ ಬರೆಯುತ್ತಿರುವುದು, ಪದೇ ಪದೇ ಆರ್ ಎಸ್ಎಸ್ ಬಗ್ಗೆ ನಿಂದನೀಯ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡುತ್ತಿದ್ದರೆ, ಕಾಂಗ್ರೆಸ್ ಕ್ರಾಂತಿಯ ರೇಸ್ ನಲ್ಲಿ ಡಿಸಿಎಂ ಡಿಕೆ.ಶಿವಕುಮಾರ್ ಅವರನ್ನು ಓವರ್ ಟೇಕ್ ಮಾಡಿ ತಾವೇ ಸಿಎಂ ಹುದ್ದೆಗೆ ಏರುವ ಕನಸು ಕಾಣುತ್ತಿರುವಂತಿದೆ.
ಹೇಗಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಸಂಘ ಗೀತೆ ಹಾಡುವ ಮೂಲಕ, ಇಶಾ ಫೌಂಡೇಶನ್ ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ, ಕುಂಭ ಮೇಳಕ್ಕೆ ಹೋಗುವ ಮೂಲಕ, ಸಂಸ್ಕೃತ ಶ್ಲೋಕಗಳನ್ನು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಮುಜುಗರ ಉಂಟು ಮಾಡುತ್ತಿದ್ದಾರೆ.
ಇದನ್ನೇ ನೆಪವಾಗಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಬದ್ಧತೆ ಇಲ್ಲ ಎನ್ನುವ ಹಣೆಪಟ್ಟಿ ಕಟ್ಟಿ ಪ್ರಿಯಾಂಕ್ ಖರ್ಗೆ ಅವರೇ ಕಟ್ಟರ್ ಆರ್‌ಎಸ್‌ಎಸ್ ವಿರೋಧಿ ಎಂದು ಬಿಂಬಿಸುವ ಮೂಲಕ ಅವರನ್ನು ಉತ್ತರಾಧಿಕಾರಿ ಮಾಡುವ ಚಾಣಾಕ್ಷ ತಂತ್ರಗಾರಿಕೆಯನ್ನು ಸಿಎಂ ಸಿದ್ದರಾಮಯ್ಯನವರು ಮಾಡಿದಂತೆ ಕಾಣುತ್ತದೆ.
ಒಂದು ಕಡೆ ಡಿ.ಕೆ.ಶಿವಕುಮಾರ್ ಅವರು "A symbol of loyality" ಎನ್ನುವ ಪುಸ್ತಕ ಬರೆಸಿ ತಮ್ಮ ಹೈಕಮಾಂಡ್ ನಿಷ್ಠೆಯನ್ನು ನಿರೂಪಿಸಿ ಅವರ ಆಸೆ ಈಡೇರಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೇರೆಯದೇ ನಾಟಕ ಆಡುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಕ್ರಾಂತಿಯ ಕ್ಲೈಮ್ಯಾಕ್ಸ್ ರಣರೋಚಕವಾಗಿರುವುದಂತೂ ಗ್ಯಾರೆಂಟಿ ಎಂದು ವ್ಯಂಗ್ಯವಾಡಿದ್ದಾರೆ.
Advertisement