

ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ ದುರಂತದಲ್ಲಿ 21 ಜನರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ದುರಂತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಗೊಲ್ಲ ರಮೇಶ್ (35), ಅನುಷಾ (30), ಮಾನ್ವಿತಾ (10) ಹಾಗೂ ಮನೀಶ್ (12) ಎಂದು ಗುರುತಿಸಲಾಗಿದೆ. ಈ ಬಸ್ ನಲ್ಲಿ ನಿದ್ರೆಯ ಮಂಪರಿನಲ್ಲಿದ್ದ ನತದೃಷ್ಟ ಕುಟುಂಬ ಚಿರನಿದ್ರೆಗೆ ಜಾರಿದೆ.
ಇವರು ಮೂಲತಃ ನೆಲ್ಲೂರು ಜಿಲ್ಲೆಯ ವಿಂಜಾಮುರು ಮಂಡಲದ ಗೊಲ್ಲವರಿಪಳ್ಳಿಯವರು. ಗೊಲ್ಲ ರಮೇಶ್ ಕುಟುಂಬವು ಬೆಂಗಳೂರಿನಲ್ಲಿ ನೆಲೆಸಿತ್ತು. ಹೈದರಾಬಾದ್‌ನಿಂದ ಬೆಂಗಳೂರಿಗೆ ಬಸ್‌ನಲ್ಲಿ ಬರುವಾಗ ಶುಕ್ರವಾರ ಮುಂಜಾನೆ ಕರ್ನೂಲ್ ಜಿಲ್ಲೆಯ NH-44 ರಲ್ಲಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ನಂತರ ದುರಂತ ಸಂಭವಿಸಿದೆ. ಘಟನೆಯಲ್ಲಿ ಇಡೀ ಕುಟುಂಬ ಸಜೀವದಹನವಾಗಿದೆ.
ವಿಷಯ ತಿಳಿದು ಗೊಲ್ಲವರಿಪಳ್ಳಿಯ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಗೊಲ್ಲ ರಮೇಶ್ ಕುಟುಂಬ ದೀಪಾವಳಿ ಹಬ್ಬ ಆಚರಣೆಗೆ ನೆಲ್ಲೂರಿಗೆ ತೆರಳಿತ್ತು ಎನ್ನಲಾಗಿದೆ.
ಕರ್ನೂಲ್ ಬಸ್ ದುರಂತ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಎ ಸಿರಿ, ಬೆಳಗ್ಗಿನ ಜಾವ 3 ರಿಂದ 3:10ರ ಸುಮಾರಿಗೆ ಈ ದುರಂತ ನಡೆದಿದೆ ಆಗಿದೆ. ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಂಧನ ಸೋರಿಕೆಯಾಗಿ ಬೆಂಕಿ ಹೊತ್ತುಕೊಂಡಿದೆ. ಬಸ್‌ನಲ್ಲಿದ್ದ 41 ಪ್ರಯಾಣಿಕರಲ್ಲಿ 23 ಜನರನ್ನ ರಕ್ಷಿಸಲಾಗಿದೆ. ಇಲ್ಲಿಯವರೆಗೆ ಮೃತರಲ್ಲಿ 11 ಜನರನ್ನು ಗುರುತಿಸಲಾಗಿದೆ, ಉಳಿದವರ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
Advertisement