

ನವದೆಹಲಿ: ಕರ್ನೂಲ್ ಬಸ್ ದುರಂತದಲ್ಲಿ 20 ಮಂದಿ ಸಜೀವ ದಹನಗೊಂಡಿದ್ದು, ಮೃತರ ಕುಟುಂಬಕ್ಕೆ ಕಾಂಗ್ರೆಸ್ ಸಂತಾಪ ಸೂಚಿಸಿದೆ. ಅಲ್ಲದೆ, ದುರ್ಘಟನೆ ಪದೇ ಪದೇ ಮರುಕಳಿಸುತ್ತಿದ್ದು, ಸೂಕ್ತ ಕ್ರಮದ ಅಗತ್ಯವಿದೆ ಎಂದು ಶುಕ್ರವಾರ ಹೇಳಿದೆ.
ದುರ್ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಆಂಧ್ರಪ್ರದೇಶದ ಕರ್ನೂಲಿನಲ್ಲಿ ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಬಸ್ ಬೆಂಕಿಗಾಹುತಿಯಾಗಿ ಅಮೂಲ್ಯ ಜೀವಗಳು ಬಲಿಯಾಗಿರುವುದು ತೀವ್ರ ದುಃಖಕರವಾಗಿದೆ ಎಂದು ಹೇಳಿದ್ದಾರೆ.
ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಪ್ರಯಾಣಿಕರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಹಾಗೂ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಇಂತಹ ದುರಂತಗಳು ಪದೇ ಪದೇ ಮರುಕಳಿಸುತ್ತಿರುವುದರಿಂದ ಸೂಕ್ತ ಕ್ರಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪೋಸ್ಟ್ ಮಾಡಿ, ಆಂಧ್ರಪ್ರದೇಶದ ಕರ್ನೂಲ್‌ನ ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಬಸ್ ಬೆಂಕಿ ಅಪಘಾತದಲ್ಲಿ ಅನೇಕ ಅಮಾಯಕರ ಜೀವಗಳು ಬಲಿಯಾಗಿದ್ದು, ಇದು ಅತ್ಯಂತ ದುಃಖಕರ ಮತ್ತು ನೋವಿನ ಸಂಗತಿ ಎಂದು ಹೇಳಿದ್ದಾರೆ.
ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆಂದು ತಿಳಿಸಿದ್ದಾರೆ.
ಈ ರೀತಿಯ ಪುನರಾವರ್ತಿತ ಅಪಘಾತಗಳು ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಪ್ರಯಾಣಿಕರ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ. ವಾಹನ ನಿರ್ವಹಣೆಯ ಜವಾಬ್ದಾರಿಯೊಂದಿಗೆ ಈ ಅಪಘಾತಗಳಿಗೆ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.
Advertisement