

ಮುಂಬಯಿ: ಭಾರತೀಯ ಜಾಹೀರಾತು ಕ್ಷೇತ್ರದ ವಾಸ್ತು ಶಿಲ್ಪಿ ಎಂದು ಕರೆಯಲ್ಪಡುವ ಪದ್ಮಶ್ರೀ ಪುರಸ್ಕೃತ ಪಿಯೂಷ್ ಪಾಂಡೆ ಅವರು ಗುರುವಾರ ನಿಧನರಾದರು.
70 ವರ್ಷ ವಯಸ್ಸಿನ ಪಾಂಡೆ ಸೋಂಕಿನಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ಶನಿವಾರ (ಅ.25) ನಡೆಯಲಿದೆ. ಫೆವಿಕಾಲ್ ಹಾಗೂ ವೊಡಾಫೋನ್ ಜಾಹೀರಾತುಗಳಿಗೆ ಹೆಸರುವಾಸಿಯಾದ ಪಾಂಡೆ ಅವರು ಭಾರತದ ಜಾಹೀರಾತು ಕ್ಷೇತ್ರದ ಮುಂಚೂಣಿ ವ್ಯಕ್ತಿಗಳಲ್ಲಿ ಒಬ್ಬರು. ಅವರು ಒಗಿಲ್ವಿ ಇಂಡಿಯಾ ಕಂಪೆನಿಯ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಮತ್ತು ವರ್ಲ್ಡ್‌ವೈಡ್ ಚೀಪ್ ಕ್ರಿಯೇಟಿವ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಕ್ಯಾಡ್ಬರಿಯ ಕುಚ್ ಖಾಸ್ ಹೈ, ಏಷಿಯನ್ ಪೇಂಟ್ಸ್‌ನ “ಹರ್ ಖುಷಿ ಮೇ ರಂಗ್ ಲಾಯೆ ಜಾಹೀರಾತಿನಿಂದ ವೊಡಾಫೋನ್ ಜಾಹೀರಾತಿನವೆರೆಗೆ ಅವರ ಜಾಹೀರಾತುಗಳು ಜನಮನದಲ್ಲಿ ಅಚ್ಚಳಿಯದಂತೆ ಉಳಿದಿವೆ.
2014ರ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ರಚಿಸಿದ ಅಬ್ ಕಿ ಬಾರ್, ಮೋದಿ ಸರಕಾರ್ ಎಂಬ ಘೋಷಣೆಯು ರಾಜಕೀಯ ಕ್ಷೇತ್ರದಲ್ಲೂ ಬಹಳ ಪ್ರಸಿದ್ಧಿ ಪಡೆದಿದೆ.
ಪಾಂಡೆ ಅವರ ನಿಧನಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪಿಯೂಷ್ ಪಾಂಡೆ 1982ರಲ್ಲಿ ಒಗಿಲ್ವಿ ಸಂಸ್ಥೆಗೆ ಸೇರಿದ್ದರು. ಸನ್‌ಲೈಟ್ ಡಿಟರ್ಜೆಂಟ್‌ಗಾಗಿ ತಮ್ಮ ಮೊದಲ ಜಾಹೀರಾತನ್ನು ಬರೆದರು.
ಆರು ವರ್ಷಗಳ ನಂತರ, ಅವರು ಕಂಪನಿಯ ಸೃಜನಶೀಲ ವಿಭಾಗಕ್ಕೆ ಸೇರಿಕೊಂಡರು. ಫೆವಿಕಾಲ್, ಕ್ಯಾಡ್‌ಬರಿ, ಏಷ್ಯನ್ ಪೇಂಟ್ಸ್, ಲೂನಾ ಮೊಪೆಡ್, ಫಾರ್ಚೂನ್ ಆಯಿಲ್ ಮತ್ತು ಹಲವಾರು ಇತರ ಬ್ರಾಂಡ್‌ಗಳಿಗೆ ಗಮನಾರ್ಹ ಜಾಹೀರಾತು ರಚಿಸಿದ್ದರು.
Advertisement