

ಪಾಟ್ನಾ: ಲಾಲು ಪ್ರಸಾದ್ ನೇತೃತ್ವದ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ವಿರುದ್ಧದ ತಮ್ಮ ದಾಳಿಯನ್ನು ತೀಕ್ಷ್ಣಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‌ಜೆಡಿ ಆಳ್ವಿಕೆಯಲ್ಲಿ ಬಿಹಾರದಲ್ಲಿ ಕೇವಲ ಒಂದು "ಉದ್ಯಮ" ಮಾತ್ರ ಪ್ರವರ್ಧಮಾನಕ್ಕೆ ಬಂದಿತು - ಅದು "ಅಪಹರಣ, ಸುಲಿಗೆ, ಸುಪಾರಿ ಹತ್ಯೆಗಳು ಮತ್ತು ಡಕಾಯಿತಿ" ಎಂದು ಆರೋಪಿಸಿದರು.
"ಆರ್‌ಜೆಡಿ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಎಲ್ಲಾ ಕೈಗಾರಿಕಾ ಘಟಕಗಳು ಮುಚ್ಚಲ್ಪಟ್ಟವು" ಎಂದು ಕೇಂದ್ರ ಗೃಹ ಸಚಿವರು ದೂರಿದರು.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಅಧಿಕಾರಕ್ಕೆ ಮರಳಿದರೆ ಮುಂದೆ ಬಿಹಾರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಬಹುದು ಎಂದು ಶಾ ಹೇಳಿದರು.
ನಳಂದ ಜಿಲ್ಲೆಯ ಬಿಹಾರ್‌ಶರೀಫ್‌ನಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಎನ್‌ಡಿಎನ ಉತ್ತಮ ಆಡಳಿತದ ದಾಖಲೆಯು ಬಿಹಾರದಲ್ಲಿ ಮತದಾನದ ಹಂತಗಳನ್ನು ಈಗಾಗಲೇ ಕಡಿಮೆ ಮಾಡಿದೆ ಎಂದು ತಿಳಿಸಿದರು.
"ಮುಂದಿನ ಬಾರಿ, ನಾವು ಅಧಿಕಾರಕ್ಕೆ ಮರಳಿದರೆ ಕೇವಲ ಒಂದು ಹಂತದಲ್ಲಿ ಚುನಾವಣೆಗಳು ನಡೆಯುತ್ತವೆ" ಎಂದು ಅಮಿತ್ ಶಾ ಹೇಳಿದರು.
ಇದೇ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶ್ಲಾಘಿಸಿದ ಶಾ, ಅವರ ನಾಯಕತ್ವದಲ್ಲಿ ಎನ್‌ಡಿಎ ರಾಜ್ಯವನ್ನು 'ಜಂಗಲ್ ರಾಜ್' ಮತ್ತು ನಕ್ಸಲಿಸಂನ ಪಿಡುಗಿನಿಂದ ಮುಕ್ತಗೊಳಿಸಿದೆ ಎಂದರು.
"ಕೇಂದ್ರದಲ್ಲಿರುವ ನಮ್ಮ ಸರ್ಕಾರ ಇಡೀ ದೇಶವನ್ನು ನಕ್ಸಲ್ ಪಿಡುಗಿನಿಂದ ಮುಕ್ತಗೊಳಿಸಲು ದೃಢನಿಶ್ಚಯ ಹೊಂದಿದೆ" ಎಂದು ಶಾ ಪ್ರತಿಪಾದಿಸಿದರು.
Advertisement