

ಭೋಪಾಲ್: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬಬೈಕ್ ನಲ್ಲಿ ಹಿಂಬಾಲಿಸಿ, ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದೆ.
ಆಸ್ಟ್ರೇಲಿಯಾ ತಂಡದ ಭದ್ರತಾ ವ್ಯವಸ್ಥಾಪಕ ಡ್ಯಾನಿ ಸಿಮ್ಮನ್ಸ್ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ ಇಂದೋರ್ ಪೊಲೀಸರು ಶುಕ್ರವಾರ ಸಂಜೆ ಖಜ್ರಾನಾ ಪ್ರದೇಶದ ನಿವಾಸಿ ಆರೋಪಿ ಅಕೀಲ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ, ಇಂಗ್ಲೆಂಡ್ ವಿರುದ್ಧ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಇಂದೋರ್ ಪೊಲೀಸ್ ಮೂಲಗಳ ಪ್ರಕಾರ, ಅಕ್ಟೋಬರ್ 23 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಇಬ್ಬರು ಆಟಗಾರ್ತಿಯರು ತಾವು ತಂಗಿದ್ದ ರಾಡಿಸನ್ ಬ್ಲೂ ಹೋಟೆಲ್‌ನಿಂದ ಸುತ್ತಮುತ್ತಲಿನ ಜನಪ್ರಿಯ ಕೆಫೆಗೆ ಜಾಗಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಬಂದ ಆರೋಪಿ ಯುವಕ, ಕೆಫೆಗೆ ಜಾಗಿಂಗ್ ಹೋಗುತ್ತಿದ್ದ ಇಬ್ಬರು ಆಟಗಾರ್ತಿಯರನ್ನು ಹಿಂಬಾಲಿಸಿದ್ದಾನೆ. ಬಿಳಿ ಶರ್ಟ್ ಮತ್ತು ಕಪ್ಪು ಕ್ಯಾಪ್ ಧರಿಸಿದ್ದ ಆರೋಪಿ ಈ ಇಬ್ಬರನ್ನು ಹಿಂಬಾಲಿಸಿದ್ದಾನೆ. ಆರೋಪಿ ಮೊದಲು ಇಬ್ಬರಲ್ಲಿ ಒಬ್ಬರನ್ನು ಹಿಡಿಯಲು ಪ್ರಯತ್ನಿಸಿ ಅಲ್ಲಿಂದ ಹೊರಟುಹೋದನು. ಆದರೆ ಮತ್ತೆ ಹಿಂದಿನಿಂದ ಬಂದು ಇನ್ನೊಬ್ಬ ಮಹಿಳಾ ಕ್ರಿಕೆಟಿಗರನ್ನು ಹಿಡಿದು ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಅಶಿಸ್ತಿನ ವರ್ತನೆಯಿಂದ ಆಘಾತಕ್ಕೊಳಗಾದ ಇಬ್ಬರೂ ತಮ್ಮ ಗೌಪ್ಯತೆಯನ್ನು ಕಾಪಾಡಲು ಆ ನಡವಳಿಕೆಯನ್ನು ವಿರೋಧಿಸಿದರು. ನಂತರ ತಂಡದ ಭದ್ರತಾ ವ್ಯವಸ್ಥಾಪಕ ಡ್ಯಾನಿ ಸಿಮ್ಮನ್ಸ್‌ಗೆ ಫೋನ್ ಮೂಲಕ ತಾವು ತೊಂದರೆಯಲ್ಲಿರುವ ಸಂಕೇತವನ್ನು ಕಳುಹಿಸಿದರು. ನಂತರ ಅವರಲ್ಲಿ ಒಬ್ಬರು ತಂಡದ ಭದ್ರತಾ ವ್ಯವಸ್ಥಾಪಕರಿಗೆ ಘಟನೆಯ ಬಗ್ಗೆ ತಿಳಿಸಲು ಕರೆ ಮಾಡಿದರು. ಅವರು ತಕ್ಷಣ ಕಾರಿನಲ್ಲಿ ಸ್ಥಳಕ್ಕೆ ಧಾವಿಸಿದರು.
ನಂತರ ಸಿಮನ್ಸ್ ಅವರು ಮಧ್ಯ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಮುಖ್ಯ ಆಡಳಿತ ಅಧಿಕಾರಿ(ಸಿಎಒ) ರೋಹಿತ್ ಪಂಡಿತ್ ಅವರ ಸಹಾಯದಿಂದ ಇಂದೋರ್ ಪೊಲೀಸರಿಗೆ ಈ ವಿಷಯವನ್ನು ವರದಿ ಮಾಡಿದರು. ಅದರ ನಂತರ ಅಕ್ಟೋಬರ್ 23 ರಂದು ನಗರದ ಎಂಐಜಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು.
Advertisement