

ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಾಳೆ ಬೆಳಗ್ಗೆಯೊಳಗೆ ಒಡಿಶಾದಲ್ಲಿ 'ಮೊಂಥಾ' ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ಗಾಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆಂಧ್ರ ಪ್ರದೇಶದ ಅನೇಕ ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್ ಆಲರ್ಟ್ ನೀಡಲಾಗಿದೆ. ಮಂಗಳವಾರ ತಡರಾತ್ರಿ ವಾಯುಭಾರ ಕುಸಿತಕ್ಕೂ ಮುನ್ನ ಚಂಡಮಾರುತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಇಂದು ಬೆಳಗ್ಗೆ 9-47ರಲ್ಲಿ ನೀಡಲಾದ ಮಾಹಿತಿಯಂತೆ ನೈಋತ್ಯ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೊಂಥಾ ಚಂಡಮಾರುತವು15 ಕಿಮೀ ವೇಗದಲ್ಲಿ ವಾಯುವ್ಯಕ್ಕೆ ಚಲಿಸಿತು. ಸೋಮವಾರ ಬೆಳಗ್ಗೆ 5:30 ರ ಹೊತ್ತಿಗೆ, ಇದು ಪಶ್ಚಿಮ ಕೇಂದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ನೈಋತ್ಯ ಮತ್ತು ಪಕ್ಕದ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿತ್ತು ಎಂದು IMD ತಿಳಿಸಿದೆ.
ಮೊಂಥಾ' ಚಂಡಮಾರುತ ಅಕ್ಟೋಬರ್ 28 ರ ಸಂಜೆ ಅಥವಾ ರಾತ್ರಿಯಲ್ಲಿ ಗಂಟೆಗೆ 90 ರಿಂದ 100 ಕಿ. ಮೀ ವೇಗದಲ್ಲಿ ಬಿರುಗಾಳಿಯೊಂದಿಗೆ ಕಾಕಿನಾಡ, ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣಂ ನಡುವೆ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.
ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್: ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್: ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ.
ಪ್ರಕಾಶಂ, ಬಾಪಟ್ಲಾ, ಕೃಷ್ಣ, ನೆಲ್ಲೂರು, ಪಶ್ಚಿಮ ಗೋದಾವರಿ, ಕೋನಸೀಮಾ ಮತ್ತು ಕಾಕಿನಾಡ ಜಿಲ್ಲೆಯ್ಲಿ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಗಳನ್ನು ಸಜ್ಜುಗೊಳಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಒಡಿಶಾದ ಎಲ್ಲಾ 30 ಜಿಲ್ಲೆಗಳಲ್ಲಿ ಹೈ ಅಲರ್ಟ್: ಸ್ಥಳಾಂತರ ಕಾರ್ಯಆರಂಭಿಸಿದ ಸರ್ಕಾರ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಭಾನುವಾರ ಎಲ್ಲಾ 30 ಜಿಲ್ಲೆಗಳನ್ನು ಅಲರ್ಟ್ ಘೋಷಿಸಿದೆ. ಅಕ್ಟೋಬರ್ 28 ಮತ್ತು 29 ರಂದು ಒಡಿಶಾದಲ್ಲಿ ಅತಿ ಹೆಚ್ಚು ಭಾರೀ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 29 ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ. ಚಂಡ ಮಾರುತ ಪೀಡಿತ ಸ್ಥಳಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಸರ್ಕಾರ ಪ್ರಾರಂಭಿಸಿದೆ. ರಾಜ್ಯದ ಎಂಟು ದಕ್ಷಿಣ ಜಿಲ್ಲೆಗಳಲ್ಲಿ 128 ವಿಪತ್ತು ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಿದೆ. ರಾಜ್ಯ ಸರ್ಕಾರವು ಎಂಟು ದಕ್ಷಿಣ ಜಿಲ್ಲೆಗಳ ಗುಡ್ಡಗಾಡು ಮತ್ತು ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುತ್ತಿದೆ ಎಂದು ಒಡಿಶಾ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಆರೆಂಜ್ ಅಲರ್ಟ್: ಅಕ್ಟೋಬರ್ 27 ಮತ್ತು 28 ರಂದು ತಮಿಳುನಾಡು ಮತ್ತು ಪುದುಚೇರಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಆಲರ್ಟ್ ನೀಡಿದೆ. ಪೂರ್ವ ಕರಾವಳಿ ಪ್ರದೇಶದಲ್ಲಿ ಮೊಂಥಾ ಚಂಡಮಾರುತದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಚೆನ್ನೈ ಮತ್ತು ಇತರ ಜಿಲ್ಲೆಗಳಿಗೆ ಇಂದು ಆರೆಂಜ್ ಆಲರ್ಟ್ ನೀಡಲಾಗಿದೆ. ಮೊಂಥಾ ಚಂಡಮಾರುತದಿಂದ ಕರ್ನಾಟಕದಲ್ಲಿಯೂ ಗುಡುಗು ಸಹಿತ ಭಾರಿ ಅಥವಾ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Advertisement