

ನವದೆಹಲಿ: 7 ತಿಂಗಳ ಗರ್ಭಿಣಿಯಾಗಿದ್ದೂ 145 ಕೆಜಿ ತೂಕ ಎತ್ತಿ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಪದಕ ಪಡೆದ ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ವೊಬ್ಬರ ಸಾಹಸ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. 'ಧೈರ್ಯೇ ಸಾಹಸೇ ಲಕ್ಷ್ಮೀ' ಎಂಬ ಸಾಲಿಗೆ ದೆಹಲಿಯ ಮಹಿಳಾ ಪೊಲೀಸ್ ಪೇದೆಯೊಬ್ಬರ ಸಾಧನೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 7 ತಿಂಗಳ ಗರ್ಭಿಣಿಯಾಗಿರುವ ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ 145 ಕೆಜಿ ತೂಕ ಎತ್ತಿ ಅದ್ಭುತ ಪದಕ ಗೆದ್ದಿದ್ದಾರೆ. ಧೈರ್ಯವಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಅವರು ತಮ್ಮ ಸಾಧನೆಯ ಮೂಲಕ ಸಂದೇಶ ಸಾರಿದ್ದಾರೆ.
ಆಂಧ್ರಪ್ರದೇಶದಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ವೇಟ್‌ಲಿಫ್ಟಿಂಗ್ ಕ್ಲಸ್ಟರ್ 2025-26 ರಲ್ಲಿ ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ಸೋನಿಕಾ ಯಾದವ್ ಇತಿಹಾಸ ನಿರ್ಮಿಸಿದ್ದು, 145 ಕೆಜಿ ಡೆಡ್‌ಲಿಫ್ಟ್ ಮಾಡಿ ಕಂಚಿನ ಪದಕ ಗೆದ್ದಿದ್ದಾರೆ.
ಅಂದಹಾಗೆ ಸೋನಿಕಾ ಏಳು ತಿಂಗಳ ಗರ್ಭಿಣಿಯಾಗಿದ್ದು, ಮೇ ತಿಂಗಳಲ್ಲಿ ತಾನು ತಾಯಿಯಾಗಲಿದ್ದೇನೆ ಎಂದು ತಿಳಿದಾಗ, ಆಕೆಯ ಪತಿ ಜಿಮ್‌ಗೆ ಹೋಗುವುದನ್ನು ಮತ್ತು ತರಬೇತಿ ಪಡೆಯುವುದನ್ನು ನಿಲ್ಲಿಸಬಹುದೆಂದು ಭಾವಿಸಿದ್ದರು. ಆದರೆ ಸೋನಿಕಾ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿ ಗರ್ಭಿಣಿಯಾಗಿದ್ದೂ ತಮ್ಮ ವೇಟ್ ಲಿಫ್ಟಿಂಗ್ ತರಬೇತಿ ಮುಂದುವರೆಸಿದ್ದರು. ಇದೀಗ ಅವರ ಪರಿಶ್ರಮಕ್ಕೆ ಫಲವಾಗಿ ಕಂಚಿನ ಪದಕ ಗೆದ್ದಿದ್ದಾರೆ.
ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಸೋನಿಕಾ, 'ತನ್ನ ಗರ್ಭಧಾರಣೆಯ ಉದ್ದಕ್ಕೂ ವೇಟ್‌ಲಿಫ್ಟಿಂಗ್ ಮುಂದುವರಿಸಿದ್ದೆ. ಆ ಧೈರ್ಯವೇ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆಲ್ಲಲು ಸಹಾಯ ಮಾಡಿತು ಎಂದು ಅವರು ಹೇಳಿದರು.
ಅಲ್ಲದೆ ಗರ್ಭಿಣಿಯಾಗಿದ್ದೂ ಇದೀ ರೀತಿಯ ಸಾಧನೆ ಮಾಡಿದ್ದ ಲೂಸಿ ಮಾರ್ಟಿನ್ಸ್ ಎಂಬ ಮಹಿಳೆಯ ವಿಡಿಯೋ ನೋಡಿ ಅದರಿಂದ ಸ್ಪೂರ್ತಿ ಪಡೆದು ಅವರನ್ನು ಸಂಪರ್ಕಿಸಿ ಅವರಿಂದ ತರಬೇತಿ ಸಲಹೆಗಳನ್ನು ಪಡೆದಿದ್ದಾಗಿ ಸೋನಿಕಾ ಹೇಳಿದ್ದಾರೆ.
2023 ರಲ್ಲಿ, ಅವರು ದೆಹಲಿ ರಾಜ್ಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು ಮತ್ತು ಅಂದಿನಿಂದ ಅವರ ಪ್ರಯಾಣ ಮುಂದುವರೆದಿದೆ.
ಗರ್ಭಿಣಿ ಎಂದು ತಿಳಿದು ಚಪ್ಪಾಳೆ ತಟ್ಟಿದ ಪ್ರೇಕ್ಷಕರು
ಆರಂಭದಲ್ಲಿ, ಸೋನಿಕಾ ಗರ್ಭಿಣಿ ಎಂದು ಯಾರಿಗೂ ತಿಳಿದಿರಲಿಲ್ಲ. ಅವರು ಸಡಿಲವಾದ ಬಟ್ಟೆಗಳನ್ನು ಧರಿಸಿದ್ದರು, ಮತ್ತು ಬೆಂಚ್ ಪ್ರೆಸ್ ನಂತರ ಅವರ ಪತಿ ಅವರಿಗೆ ಸಹಾಯ ಮಾಡಿದಾಗಲೂ ಜನರು ಏನನ್ನೂ ಅನುಮಾನಿಸಲಿಲ್ಲ. ಆದರೆ ಸತ್ಯ ಹೊರಬಂದಾಗ, ಇಡೀ ಕ್ರೀಡಾಂಗಣವು ಚಪ್ಪಾಳೆಯಿಂದ ತುಂಬಿತು. ಇತರ ತಂಡಗಳ ಮಹಿಳಾ ಪೊಲೀಸ್ ಅಧಿಕಾರಿಗಳು ಅವರನ್ನು ಅಭಿನಂದಿಸಲು ಬಂದರು ಮತ್ತು ಅವರೊಂದಿಗೆ ಫೋಟೋಗಳನ್ನು ತೆಗೆದುಕೊಂಡರು.
ದೆಹಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ
ಸೋನಿಕಾ 2014 ರ ಬ್ಯಾಚ್ ನ ದೆಹಲಿ ಕಾನ್‌ಸ್ಟೆಬಲ್ ಆಗಿದ್ದು, ಪ್ರಸ್ತುತ ಸಮುದಾಯ ಪೊಲೀಸ್ ಸೆಲ್‌ನಲ್ಲಿ ನೇಮಕಗೊಂಡಿದ್ದಾರೆ. ಈ ಹಿಂದೆ, ಅವರು ಮಜ್ನು ಕಾ ತಿಲಾ ಪ್ರದೇಶದಲ್ಲಿ ಬೀಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು, ಅಲ್ಲಿ ಅವರು ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಶ್ಲಾಘನೀಯ ಕೆಲಸ ಮಾಡಿದ್ದರು. 2022 ರಲ್ಲಿ ದೆಹಲಿ ಪೊಲೀಸ್ ಆಯುಕ್ತರಿಂದ ಅವರಿಗೆ ಸನ್ಮಾನಿಸಲಾಯಿತು. ಮಹಿಳಾ ದಿನದಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಅವರ ಸಾಧನೆಗಳನ್ನು ಗುರುತಿಸಿದ್ದರು.
Advertisement