

ಚೆನ್ನೈ: ರಾಜಕೀಯ ಪಕ್ಷಗಳು ನಡೆಸುವ ರೋಡ್ ಶೋಗಳು ಮತ್ತು ರ‍್ಯಾಲಿಗಳು ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (SOP) 10 ದಿನಗಳ ಒಳಗಾಗಿ ರೂಪಿಸುವಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರೋಡ್ ಶೋ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವಿಗೀಡಾಗಿದ್ದರು. ಈ ಪ್ರಕರಣ ಕುರಿತ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಂಎಂ ಶ್ರೀವಾಸ್ತವ ನ್ಯಾಯಮೂರ್ತಿ ಜಿ ಅರುಲ್ ಮುರುಗನ್ ಅವರಿದ್ದ ಪೀಠವು ಈ ನಿರ್ದೇಶನ ನೀಡಿತು.
ಎಸ್‌ಒಪಿ ರಚನೆಯಾಗುವವರೆಗೆ ಯಾವುದೇ ರಾಜಕೀಯ ಪಕ್ಷಗಳು ರ‍್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ. ಆದರೆ, ನಾವು ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ತಡೆಯುವುದಿಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ. ರವೀಂದ್ರನ್ ಅವರು ಪೀಠಕ್ಕೆ ತಿಳಿಸಿದರು.
ಎಸ್‌ಒಪಿ ಕರಡನ್ನು ಯಾವಾಗ ರೂಪಿಸಲಾಗುತ್ತದೆ ಎಂದು ಪೀಠವು ಎಎಜಿಯನ್ನು ಕೇಳಿದಾಗ, ರಾಜ್ಯ ಸರ್ಕಾರವು ಪೊಲೀಸ್, ಅಗ್ನಿಶಾಮಕ ಇಲಾಖೆ, ಸ್ಥಳೀಯ ನಗರ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮಾಲೋಚಿಸಿ ನಂತರ ಅದನ್ನು ರೂಪಿಸಬೇಕು. ಇದಕ್ಕಾಗಿ ಹೆಚ್ಚಿನ ಸಮಯ ಬೇಕು' ಎಂದು ಕೇಳಿದರು.
ರಾಜ್ಯ ಸರ್ಕಾರವು 10 ದಿನಗಳಲ್ಲಿ SOPಯನ್ನು ರೂಪಿಸಬೇಕು, ಇಲ್ಲದಿದ್ದರೆ ಆದೇಶ ನೀಡಲಾಗುವುದು ಎಂದು ಪೀಠ ಹೇಳಿತು.
ಈ ಪ್ರಕರಣದಲ್ಲಿ ಮಧ್ಯಂತರ ಅರ್ಜಿದಾರರನ್ನಾಗಿ ಸೇರಿಸಿಕೊಳ್ಳಲು ಎಐಎಡಿಎಂಕೆ ಅನುಮತಿ ಕೋರಿತು. ಮುಂದಿನ ವಿಚಾರಣೆಯನ್ನು ಪೀಠವು ನವೆಂಬರ್ 11ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು 'ಹಿಂತೆಗೆದುಕೊಳ್ಳಲಾಗಿದೆ' ಎಂದು ಪೀಠ ವಜಾಗೊಳಿಸಿತು.
Advertisement