

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜನ್ ಸೂರಾಜ್ ಪಕ್ಷದ ಸಂಸ್ಥಾಪಕ ಹಾಗೂ ಚುನಾವಣಾ ತಂತ್ರಗಾರ, ಪ್ರಶಾಂತ್ ಕಿಶೋರ್, ಪಶ್ಚಿಮ ಬಂಗಾಳ ಮತ್ತು ಬಿಹಾರ ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಗಹಾರ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಅವರ ಪೂರ್ವಜರ ಗ್ರಾಮ ಕೋನಾರ್‌ನಲ್ಲಿರುವ ಮಧ್ಯ ವಿದ್ಯಾಲಯ ಅವರ ಮತದಾನ ಕೇಂದ್ರವಾಗಿದೆ.
ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಧಾನಸಭಾ ಕ್ಷೇತ್ರವಾದ ಭಬಾನಿಪುರದಲ್ಲಿ 121 ಕಾಲಿಘಾಟ್ ರಸ್ತೆ ಎಂದು ಪ್ರಶಾಂತ್ ಕಿಶೋರ್ ಅವರ ವಿಳಾಸವಿದೆ. ತಮ್ಮ ಮತಕೇಂದ್ರವನ್ನು ಬಿ ರಾಣಿಶಂಕರಿ ಲೇನ್‌ನಲ್ಲಿರುವ ಸೇಂಟ್ ಹೆಲೆನ್ ಶಾಲೆ ಎಂದು ಹೆಸರಿಸಲಾಗಿದೆ. ಕಿಶೋರ್ ಅವರು 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಸಲಹೆಗಾರರಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ಕೆಲಸ ಮಾಡಿದ್ದರು.
ಈ ಕುರಿತ ಪ್ರತಿಕ್ರಿಯೆಗೆ ಪ್ರಶಾಂಕ್ ಕಿಶೋರ್ ಸಿಕ್ಕಿಲ್ಲ. ಆದಾಗ್ಯೂ, ಪಶ್ಚಿಮ ಬಂಗಾಳ ಚುನಾವಣೆಯ ನಂತರ ಕಿಶೋರ್ ಕಾರ್ಗಹಾರ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿ ದಾಖಲಾಗಿದ್ದಾರೆ ಎಂದು ಜನ ಸೂರಜ್ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು. "ಅವರು ಬಿಹಾರದ ಕಾರ್ಗಹಾರ್ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾದ ನಂತರ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಸಲು ಅರ್ಜಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳದಿಂದ ಹೆಸರು ತೆಗೆಯಲು ಸಲ್ಲಿಸಿರುವ ಅರ್ಜಿಯ ಸ್ಥಿತಿಗತಿ ನಮಗೆ ತಿಳಿದಿಲ್ಲ" ಎಂದು ಅವರು ತಿಳಿಸಿದರು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಕಾರ್ಗಹಾರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ತದನಂತರ ಅವರು ರಾಘೋಪುರದಿಂದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಪ್ರಸಾದ್ ಯಾದವ್ ವಿರುದ್ಧ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ನಂತರ ಅವರು ಇದ್ದಕ್ಕಿದ್ದಂತೆ ಚುನಾವಣೆಗೆ ಸ್ಪರ್ಧಿಸುವ ಆಲೋಚನೆಯನ್ನು ಕೈಬಿಟ್ಟರು.
Advertisement