

ಪೂರ್ವ ಚಂಪಾರಣ್: ಬಿಹಾರದಲ್ಲಿನ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಜನ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಾತ್ ಹಬ್ಬಕ್ಕೆ ಸ್ವಗ್ರಾಮಕ್ಕೆ ಮರಳಲು ಬಿಹಾರದ ಯುವ ಜನತೆ ಪರದಾಡುತ್ತಿದ್ದರೆ, ಗುಜರಾತಿನಲ್ಲಿ ಬುಲೆಟ್ ರೈಲು ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಿಶೋರ್, ಇದು ಜನ ಸೂರಜ್ ಜನ್ಮ ಭೂಮಿ, ಇಲ್ಲಿಂದಲೇ ಮೂರುವರೆ ವರ್ಷಗಳ ಹಿಂದೆ ಪಕ್ಷ ಅಸ್ತಿತ್ವಕ್ಕೆ ಬಂದಿದೆ. ಬಿಹಾರದ ಜನರ ರಾಜಕೀಯ ಗುಲಾಮಗಿರಿಯನ್ನು ಕೊನೆಗೊಳಿಸುತ್ತೇವೆ.
ಇಲ್ಲಿನ ಜನ ಲಾಲುಗೆ ಹೆದರಿ ಬಿಜೆಪಿಗೆ ಮತ ಹಾಕುತ್ತಿದ್ದರು. ಇಲ್ಲ ಬಿಜೆಪಿಗೆ ಹೆದರಿ ಲಾಲುಗೆ ಮತ ಹಾಕುತ್ತಿದ್ದರು. ಈಗಿರುವ ವ್ಯವಸ್ಥೆಯನ್ನು ಮುಂದುವರಿಸಬೇಕೇ ಅಥವಾ ಬದಲಾವಣೆಯನ್ನು ತರಬೇಕೇ ಎಂಬುದನ್ನು ಮುಂದಿನ 10-15 ದಿನಗಳಲ್ಲಿ ಜನ ನಿರ್ಧರಿಸಬೇಕು ಎಂದರು.
ಗುಜರಾತ್‌ನಲ್ಲಿ 1 ಲಕ್ಷ ಕೋಟಿ ರೂ. ಮೌಲ್ಯದ ಬುಲೆಟ್ ರೈಲು ನಿರ್ಮಿಸಲಾಗುತ್ತಿದೆ. ಆದರೆ ಬಿಹಾರದ ಯುವಕರು ಚಾತ್ ಗಾಗಿ ಮನೆಗೆ ಬರಲು ರೈಲಿನಲ್ಲಿ ಸೀಟು ಪಡೆಯಲು ಹೆಣಗಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಗೋಪಾಲ್ ಗಂಜ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನೂಪ್ ಕುಮಾರ್ ಶ್ರೀವಾಸ್ತವ ಅವರು ಪ್ರಶಾಂತ್ ಕಿಶೋರ್ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾದರು. ನವೆಂಬರ್ 6 ಮತ್ತು 11 ರಂದು ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ಆಗಿ ಫಲಿತಾಂಶ ಪ್ರಕಟವಾಗಲಿದೆ.
Advertisement