

ನವದೆಹಲಿ: ಆಪರೇಷನ್ ಸಿಂದೂರ್ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಸೆರೆ ಹಿಡಿದ ಭಾರತದ ವಾಯುಪಡೆ ಪೈಲಟ್ ಜೊತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫೋಟೋ ಕ್ಲಿಕ್ಕಿಸಿ ಕೊಂಡಿದ್ದಾರೆ.
ಅಚ್ಚರಿಯಾದರೂ ಸತ್ಯ.. ಈ ಹಿಂದೆ ಪಾಕಿಸ್ತಾನ ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ರನ್ನು ಸೆರೆ ಹಿಡಿದಿದ್ದಾಗಿ ಹೇಳಿಕೊಂಡಿತ್ತು.
ಇದೀಗ ಅದೇ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಜೊತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಫೆಲ್ ಯುದ್ಧ ವಿಮಾನ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿರುವುದು ವೈರಲ್ ಆಗುತ್ತಿದೆ.
ಅರೆ ಇದೇನಿದು ಪಾಕಿಸ್ತಾನದ ವಶದಲ್ಲಿರುವ ವ್ಯಕ್ತಿ ಜೊತೆ ಭಾರತದ ರಾಷ್ಟ್ರಪತಿಗಳು ಇರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.. ಇದಕ್ಕೆ ಉತ್ತರ ಪಾಕಿಸ್ತಾನ ಹೇಳಿದ ಸುಳ್ಳು..
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಸುಳ್ಳು ಹೇಳಿದ್ದ ಪಾಕಿಸ್ತಾನ ಅದರೊಟ್ಟಿಗೆ ಭಾರತ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರನ್ನೂ ಬಂಧಿಸಿದ್ದಾಗಿ ಸುಳ್ಳು ಹೇಳಿತ್ತು.
ಇದೀಗ ಅದೇ ಶಿವಾಂಗಿ ಸಿಂಗ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ರಾಷ್ಟ್ರಪದಿ ದ್ರೌಪದಿ ಮುರ್ಮು ಅವರು ಪಾಕಿಸ್ತಾನ ಬೃಹನ್ನಾಟಕವನ್ನು ಬಟಾ ಬಯಲು ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಅವರ ಜೊತೆ ಫೋಟೋ ತೆಗೆಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟಿದ್ದಾರೆ.
ರಾಫೆಲ್ ಯುದ್ಧ ವಿಮಾನದಲ್ಲಿ ಹಾರಾಟ
ಸಶಸ್ತ್ರ ಪಡೆಗಳ ಅಧ್ಯಕ್ಷೆ ಮತ್ತು ಸುಪ್ರೀಂ ಕಮಾಂಡರ್ ಕೂಡ ಆಗಿರುವ 67 ವರ್ಷದ ದ್ರೌಪದಿ ಮುರ್ಮು ಅವರು ಇಂದು ಹರ್ಯಾಣದ ಅಂಬಾಲಾ ವಾಯುನೆಲೆಗೆ ತೆರಳಿ ರಫೇಲ್ ಯುದ್ಧ ವಿಮಾನದಲ್ಲಿ (Rafale Fighter Jet) ಹಾರಾಟ ನಡೆಸಿದರು. ಹಾರಾಟ ನಡೆಸಿದ ಬಳಿಕ ಶಿವಾಂಗಿ ಸಿಂಗ್ ಅವರ ಜೊತೆ ದ್ರೌಪದಿ ಮುರ್ಮು ಫೋಟೋ ಕ್ಲಿಕ್ಕಿಸಿದರು.
ಯಾರಿದು ಶಿವಾಂಗಿ ಸಿಂಗ್?
ಆಪರೇಷನ್ ಸಿಂಧೂರದ (Operation Sindoor) ಸಮಯದಲ್ಲಿ ಪಾಕಿಸ್ತಾನ (Pakistan) ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿತ್ತು. ಅದರಲ್ಲಿ ಶಿವಾಂಗಿ ಸಿಂಗ್ ಅವರನ್ನು ನಾವು ಸೆರೆ ಹಿಡಿದಿದ್ದೇವೆ ಎಂದು ಹೇಳಿತ್ತು. ಪತನಗೊಂಡ ರಫೇಲ್ ಯುದ್ಧ ವಿಮಾನದಿಂದ ಹಾರಿದ್ದ ಶಿವಾಂಗಿ ಸಿಂಗ್ ಅವರನ್ನು ನಾವು ಸೆರೆ ಹಿಡಿದಿದ್ದೇವೆ ಎಂದು ಹೇಳಿತ್ತು.
ಭಾರತ ಇದಕ್ಕೆ ಪ್ರತಿಕ್ರಿಯಿಸಿ ನಮ್ಮ ಯಾವುದೇ ಪೈಲಟ್‌ಗಳನ್ನು ಪಾಕಿಸ್ತಾನ ಸೆರೆ ಹಿಡಿದಿಲ್ಲ. ಕಾರ್ಯಾಚರಣೆ ನಡೆಸಿ ನಮ್ಮ ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿಸಿತ್ತು. `ಆಪರೇಷನ್ ಸಿಂಧೂರ’ದ (Operation Sindoor) ವೇಳೆ ಅಂಬಾಲಾ ಏರ್‌ಬೇಸ್‌ನಿಂದ ಟೇಕಾಫ್ ಆದ ನಮ್ಮ ಫೈಟರ್ ಜೆಟ್‌ಗಳು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್ ಮಾಡಿದ್ದವು.
ದ್ರೌಪದಿ ಮುರ್ಮು ಯುದ್ಧ ವಿಮಾನ ಹಾರಾಟ
2023ರ ಏಪ್ರಿಲ್ 8ರಂದು ಅಸ್ಸಾಂನ ತೇಜ್‌ಪುರ ಏರ್‌ಬೇಸ್‌ನಲ್ಲಿ ಸುಖೋಯ್ -30 ಯುದ್ಧ ವಿಮಾನದಲ್ಲಿ ದ್ರೌಪದಿ ಮುರ್ಮು ಹಾರಾಟ ನಡೆಸಿದ್ದರು. ಇದಕ್ಕೂ ಮುನ್ನ ಭಾರತದ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಮತ್ತು ಅಬ್ದುಲ್ ಕಲಾಂ ಅವರು ಸುಖೋಯ್-30 ಫೈಟರ್ ಜೆಟ್‌ಗಳಲ್ಲಿ ಹಾರಾಟ ನಡೆಸಿದ್ದರು.
Advertisement