

ಅಕೋಲಾ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಕೆಲವು ಗ್ರಾಮಗಳ ರೈತರು ಅತಿವೃಷ್ಟಿಯಿಂದ ಆದ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರದ ವಿಮಾ ಯೋಜನೆಯಡಿ ಕೇವಲ ರೂ.3 ಗಳಿಂದ 21 ರೂ. ಗಳಷ್ಟು ಪರಿಹಾರ ಪಡೆದಿದ್ದಾರೆ. ಈ ನೆರವನ್ನು ತಮ್ಮ 'ಅಪಮಾನ' ಮತ್ತು 'ಅಪಹಾಸ್ಯ' ಎಂದು ಹೇಳಿಕೊಂಡಿದ್ದಾರೆ.
ದೀಪಾವಳಿಗೆ ಮುನ್ನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ತಮಗೆ ದೊರೆತ ಅಲ್ಪ ನೆರವಿಗೆ ನಿರಾಸೆ ವ್ಯಕ್ತಪಡಿಸಿದ ರೈತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಚೆಕ್‌ಗಳ ಮೂಲಕ ಮೊತ್ತವನ್ನು ಹಿಂದಿರುಗಿಸಿದರು. ಇದು ಪರಿಹಾರವಲ್ಲ, ರೈತರನ್ನು ಅಣಕಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೆಪ್ಟೆಂಬರ್‌ನಲ್ಲಿ ಸುರಿದ ಅತಿವೃಷ್ಟಿಯಿಂದ ಅಕೋಲಾ ಜಿಲ್ಲೆಯಾದ್ಯಂತ ಸೋಯಾಬೀನ್, ಹತ್ತಿ ಮತ್ತು ಮೂಂಗ್ ಬೆಳೆಗಳ ವ್ಯಾಪಕ ಹಾನಿಯಾಗಿದೆ. ದೀಪಾವಳಿಗೂ ಮುನ್ನ ಸಂತ್ರಸ್ತ ರೈತರಿಗೆ ಆರ್ಥಿಕ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಅದರಂತೆ ರೈತರು ತಮ್ಮ ಜಮೀನು ದಾಖಲೆಗಳು, ಆಧಾರ್ ಮತ್ತು ಬ್ಯಾಂಕ್ ವಿವರಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಪರಿಹಾರ ಪ್ರಕ್ರಿಯೆಗಾಗಿ ಕಂದಾಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಆದರೆ, ಸರ್ಕಾರದ ಬಳಿ ಹಣ ಲಭ್ಯವಿದ್ದರೂ ಹಣ ವರ್ಗಾವಣೆಯಲ್ಲಿ ವಿಳಂಬವಾಗಿದೆ. ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ಸ್ಥಳೀಯ ಕಂದಾಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.
ಬೆಳೆ ವಿಮಾ ಯೋಜನೆಯಡಿ ಪರಿಹಾರದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಆದರೆ ಹಲವಾರು ಸಂದರ್ಭಗಳಲ್ಲಿ ರೂ. 3 ರಿಂದ ರೂ. 21.85 ರ ನಡುವೆ ಹಣವನ್ನು ಪಾವತಿ ಮಾಡಲಾಗಿದೆ.
ನಾವು ಎಲ್ಲಾ ಬೆಳೆಗಳನ್ನು ಕಳೆದುಕೊಂಡಿದ್ದು, ಇಷ್ಟು ಅಲ್ಪ ಹಣವನ್ನು ನಾವು ಪರಿಹಾರವೆಂದು ಸ್ವೀಕರಿಸುತ್ತಾರೆ ಎಂಬುದು ಸರ್ಕಾರದ ನಿರೀಕ್ಷೆಯೇ? ಇದು ರೈತರಿಗೆ ಮಾಡಿದ ಅವಮಾನವಾಗಿದೆ ಎಂದು ದಿನೋಡ ಗ್ರಾಮದ ಕೃಷಿಕರೊಬ್ಬರು ಹೇಳಿದರು. ಅಲ್ಪಸ್ವಲ್ಪ ಪರಿಹಾರ ಪಡೆದಿದ್ದಕ್ಕೆ ಸಿಟ್ಟಿಗೆದ್ದ ದಿನೋಡ, ಕಾವಸ, ಕುಟಸ ಗ್ರಾಮಗಳ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಚೆಕ್‌ಗಳನ್ನು ಸಲ್ಲಿಸಿ ಹಣ ಹಿಂದಿರುಗಿಸಿದರು.
"ಇದು ಯಾವ ರೀತಿಯ ಪರಿಹಾರ? ನಾವು ಭಾರಿ ನಷ್ಟಕ್ಕೊಳಗಾಗಿರುವಾಗ ಕೇಲವೇ ರೂ. ಹೇಗೆ ಸಹಾಯ ಮಾಡುತ್ತದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಯೂತ್ ಕಾಂಗ್ರೆಸ್ ವಕ್ತಾರ ಕಪಿಲ್ ಧೋಕೆ ಮಾತನಾಡಿ, ‘ರೈತನನ್ನು ಗೌರವಿಸಲು ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಅವಮಾನಿಸಬೇಡಿ, ಇದು ಸಹಾಯವಲ್ಲ, ಅಪಹಾಸ್ಯ’ ಎಂದು ವಾಗ್ದಾಳಿ ನಡೆಸಿದರು.
ಸರಕಾರ ಪರಿಹಾರದ ಅಂಕಿಅಂಶಗಳನ್ನು ಪರಿಶೀಲಿಸಿ ನೈಜ ಹಾನಿಯ ಅಂದಾಜು ಆಧರಿಸಿ ನ್ಯಾಯಯುತ ಪರಿಹಾರವನ್ನು ಘೋಷಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ. ಬೆಳೆ ನಷ್ಟದ ನೈಜ ಮೌಲ್ಯಮಾಪನವನ್ನು ನಡೆಸಬೇಕು ಮತ್ತು ಹಾನಿಗೊಳಗಾದ ರೈತರಿಗೆ ತಕ್ಷಣದ ಮತ್ತು ಸಮರ್ಪಕ ಪರಿಹಾರವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
Advertisement