

ಮುಂಬೈ: ಮುಂಬೈ ಪೊಲೀಸರು ಗುರುವಾರ ಪೊವಾಯಿ ಪ್ರದೇಶದ ಸ್ಟುಡಿಯೋದಲ್ಲಿ ಒತ್ತೆಯಾಳಾಗಿದ್ದ 17 ಮಕ್ಕಳು ಸೇರಿದಂತೆ 19 ಜನರನ್ನು ರಕ್ಷಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯಾದ ವ್ಯಕ್ತಿಯನ್ನು ರೋಹಿತ್ ಆರ್ಯ ಎಂದು ಗುರುತಿಸಲಾಗಿದ್ದು, ಆತ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ ಎಂದು ಹೇಳಲಾಗಿದ್ದು, ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಆರ್ಯ ಅವರ ಎದೆಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ.
ಮುಂಬೈನ ಪೊವಾಯಿಯಲ್ಲಿರುವ ಮಹಾವೀರ್ ಕ್ಲಾಸಿಕ್ ಕಟ್ಟಡದಲ್ಲಿರುವ ಸ್ಟುಡಿಯೋದಲ್ಲಿ ಆರ್ಯ ಒತ್ತೆಯಾಳಾಗಿ ಇರಿಸಿಕೊಂಡಿದ್ದ 17 ವಿದ್ಯಾರ್ಥಿಗಳು ಮತ್ತು ಇಬ್ಬರು ವಯಸ್ಕರನ್ನು ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಆರೋಪಿ ರೋಹಿತ್ ಆರ್ಯ, ನಟನಾ ತರಗತಿ ಮತ್ತು ಆಡಿಷನ್‌ಗಳನ್ನು ನಡೆಸುವ ನೆಪದಲ್ಲಿ ಮಕ್ಕಳನ್ನು ಸ್ಟುಡಿಯೋಗೆ ಕರೆದೊಯ್ದಿದ್ದರು ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ, ಅಧಿಕಾರಿಗಳು ಆವರಣಕ್ಕೆ ನುಗ್ಗುವ ಮೊದಲು ಮಕ್ಕಳನ್ನು ಎರಡು ಗಂಟೆಗಳಿಗೂ ಹೆಚ್ಚು ಕಾಲ ಒತ್ತೆಯಾಳಾಗಿ ಇಟ್ಟಕೊಂಡಿದ್ದರು. ಪೊಲೀಸ್ ತಂಡ, ಆರೋಪಿಯಿಂದ ಏರ್ ಗನ್, ರಾಸಾಯನಿಕಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.
"ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ" ಎಂದು ಮುಂಬೈ ಜಂಟಿ ಪೊಲೀಸ್ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ಸತ್ಯನಾರಾಯಣ ಚೌಧರಿ ಅವರು ತಿಳಿಸಿದ್ದಾರೆ.
ಮಕ್ಕಳ ರಕ್ಷಣೆಗೆ ಮುನ್ನ, ಆರ್ಯ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಕೆಲವು ಜನರೊಂದಿಗೆ ನಾನು ಮಾತನಾಡಬೇಕು ಮತ್ತು ಪ್ರಶ್ನೆಗಳನ್ನು ಕೇಳಲು ಬಯಸಿದ್ದೇನೆ. ನನಗೆ ಹಣ ಬೇಡ ಎಂದು ಹೇಳಿದ್ದಾನೆ. ಮಾತನಾಡಲು ಅವಕಾಶ ನೀಡದಿದ್ದರೆ, ಸ್ಟುಡಿಯೋಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದನು.
ಪ್ರಾಥಮಿಕ ತನಿಖೆಯ ಪ್ರಕಾರ, ಆರ್ಯ ಮತ್ತು ಆತನ ಸಹಚರರು ಸರ್ಕಾರಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ಆದರೆ ಅವರಿಗೆ ವೇತನ ನೀಡದ ಕಾರಣ, ಪ್ರಚಾರ ಪಡೆಯಲು ಈ ಡ್ರಾಮಾ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement