

ಚೆನ್ನೈ: ತಮಿಳುನಾಡು ಸರ್ಕಾರ ಬಿಹಾರದ ಜನರಿಗೆ ಕಿರುಕುಳ ನೀಡುತ್ತಿದೆ ಎಂಬ ಪ್ರಧಾನಿ ಹೇಳಿಕೆ ನಂತರ ಬಿಜೆಪಿ ಮತ್ತು ಡಿಎಂಕೆ ನಡುವೆ ಮಾತಿನ ಸಮರ ತೀವ್ರಗೊಂಡಿದೆ. ಬಿಜೆಪಿ ತಮಿಳುನಾಡಿಗೆ ಅವವಮಾನ ಮಾಡಿದೆ. ಅನುದಾನ ಹಂಚಿಕೆಯಲ್ಲಿ ರಾಜ್ಯದ ವಿರುದ್ಧ ತಾರತಮ್ಯ ಮಾಡಿದೆ ಎಂದು ಡಿಎಂಕೆ ಸಂಘಟನೆಯ ಕಾರ್ಯದರ್ಶಿ ಆರ್‌ಎಸ್ ಭಾರತಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡಿನ ಜನರಿಗೆ "ಸಭ್ಯತೆಯ ಕೊರತೆ"ಇದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಒಮ್ಮೆ ಹೇಳಿದ್ದರೆ, ಬಿಜೆಪಿ ಸಂಸದರೊಬ್ಬರು ದಕ್ಷಿಣದ ಜನರನ್ನು "ಕಪ್ಪು" ಎಂದು ಹೇಳುವುದರೊಂದಿಗೆ ತಮಿಳರು ಮತ್ತು ಆಫ್ರಿಕನ್ ಅಮೇರಿಕನ್ನರ ನಡುವೆ ಹೋಲಿಕೆ ಮಾಡಿದ್ದರು.
ಬೆಂಗಳೂರಿನ ಹೋಟೆಲ್ ಮೇಲೆ ದಾಳಿ ನಡೆದಾಗ ತಮಿಳರು ಬಾಂಬ್ ಇಟ್ಟಿದ್ದಾರೆ ಎಂದು ಕರ್ನಾಟಕದ ಬಿಜೆಪಿ ಮಹಿಳಾ ಸಚಿವೆಯೊಬ್ಬರು ಆರೋಪಿಸಿದ್ದರು. ನಿಮ್ಮ ದೃಷ್ಟಿಯಲ್ಲಿ ತಮಿಳರು ಅಷ್ಟು ಕೀಳಾ? ಎಂದು ಪ್ರಶ್ನಿಸಿದ್ದಾರೆ.
ಡಿಎಂಕೆ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರ್ಕಾರ ತಮಿಳುನಾಡಿಗೆ ಅನುದಾನವನ್ನು ನಿರಾಕರಿಸುತ್ತಿದೆ. "ತಮಿಳುನಾಡು ಸಂಗ್ರಹಿಸಿ ಕೊಡುವ ತೆರಿಗೆಯಲ್ಲಿ ಪ್ರತಿ ರೂಪಾಯಿಗೆ ಕೇವಲ 29 ಪೈಸೆ ಪಡೆಯುತ್ತದೆ. ಆದರೆ ಬಿಹಾರಕ್ಕೆ 7 ರೂ. ಸಿಗುತ್ತದೆ. ಬಿಜೆಪಿ 15 ವರ್ಷಗಳ ಕಾಲ ಬಿಹಾರ ಮೈತ್ರಿಕೂಟದಲ್ಲಿ ಆಳಿದೆ. ಏನಾದರೂ ಅಭಿವೃದ್ಧಿ ಆಗಿದೆಯೇ? ಎಂದು ಟೀಕಾ ಪ್ರಹಾರ ನಡೆಸಿದ ಭಾರತಿ ಅವರು, ಪ್ರಧಾನಿ ಮೋದಿ "ಜನರನ್ನು ದಾರಿ ತಪ್ಪಿಸುತ್ತಿದ್ದಾರೆ" ಎಂದು ಆರೋಪಿಸಿದರು.
Advertisement