

ತಿರುವನಂತಪುರಂ: ನವೆಂಬರ್ 1 ರಂದು ಕೇರಳವನ್ನು 'ಕಡು ಬಡತನ ಮುಕ್ತ' ರಾಜ್ಯವೆಂದು ಘೋಷಿಸಲು ಪಿಣರಾಯಿ ವಿಜಯನ್ ಸರ್ಕಾರ ಸಜ್ಜಾಗಿದೆ. ಇಂತಹ ಘೋಷಣೆಗೆ ಬಳಸಲಾದ ಕಾರ್ಯ ವಿಧಾನ ಹಾಗೂ ಮಾಹಿತಿಯ ವಿಶ್ವಾಸಾರ್ಹತೆ ಬಗ್ಗೆ ಅನೇಕ ಅರ್ಥ ಶಾಸ್ತ್ರಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಆರ್‌ವಿಜಿ ಮೆನನ್, ಅರ್ಥಶಾಸ್ತ್ರಜ್ಞರಾದ ಎಂಎ ಉಮ್ಮನ್ ಮತ್ತು ಕೆಪಿ ಕಣ್ಣನ್, TNIE ಮಾಜಿ ಸಂಪಾದಕ ಎಂ ಕೆ ದಾಸ್ ಸೇರಿದಂತೆ 24 ಮಂದಿ ರಾಜ್ಯ ಸರ್ಕಾರಕ್ಕೆ ಬರೆದಿರುವ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ. ಅತ್ಯಂತ ಬಡವರನ್ನು ಗುರುತಿಸುವ ಮತ್ತು ಬಡತನ ನಿರ್ಮೂಲನೆ ಪ್ರಕ್ರಿಯೆಯ ಮಾನ್ಯತೆಯ ಅಧಿಕೃತ ಅಧ್ಯಯನ ವರದಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
64,006 ಕಡು ಬಡ ಕುಟುಂಬಗಳನ್ನು ಗುರುತಿಸುವ ಸಾರ್ವಜನಿಕ-ಸಹಭಾಗಿತ್ವದ ಸಮೀಕ್ಷೆ ಆಧಾರದ ಮೇಲೆ ಸರ್ಕಾರ ಘೋಷಣೆ ಮಾಡುತ್ತಿದ್ದು, ಡೇಟಾವನ್ನು ಹೇಗೆ ಸಂಗ್ರಹಿಸಲಾಗಿದೆ ಮತ್ತು ಯಾವ ಮಾನದಂಡಗಳನ್ನು ಅನ್ವಯಿಸಲಾಗಿದೆ ಎಂಬುದರ ಕುರಿತು ಪಾರದರ್ಶಕತೆಯನ್ನು ಹೊಂದಿಲ್ಲ ಎಂದಿದ್ದಾರೆ.
ಜುಲೈ 2021 ರಿಂದ ನಡೆಸಲಾದ ಸಮೀಕ್ಷೆಯಲ್ಲಿ ಆಹಾರ ಭದ್ರತೆ, ಸುರಕ್ಷಿತ ಆಶ್ರಯ, ಮೂಲ ಆದಾಯ ಮತ್ತು ಆರೋಗ್ಯ ಸ್ಥಿತಿಗತಿಯನ್ನು ಆಧಾರವಾಗಿಟ್ಟುಕೊಂಡು ಕಡು ಬಡವರೆಂದು ವರ್ಗೀಕರಿಸಿದೆ.
ಆದರೆ, ತಜ್ಞರು ಸಮೀಕ್ಷೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದು, ಯಾವ ತಜ್ಞರ ಸಮಿತಿ ನಡೆಸಿದೆ ಎಂಬುದನ್ನು ತಿಳಿಸುವಂತೆ ಒತ್ತಾಯಿಸಿದ್ದಾರೆ. ಇದು ಅಧಿಕೃತ ಡೇಟಾ ಮತ್ತು ಸರ್ಕಾರದ ಹೇಳಿಕೆ ನಡುವಿನ ಅಸಂಗತತೆಯನ್ನು ಎತ್ತಿ ತೋರಿಸಿದೆ.
ಕೇರಳ ಆರ್ಥಿಕ ಪರಾಮರ್ಶೆ 2024 ರ ಪ್ರಕಾರ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಂತ್ಯೋದಯ ಅನ್ನ ಯೋಜನೆ (AAY)ಅಡಿಯಲ್ಲಿ 5.92 ಲಕ್ಷ ಕುಟುಂಬಗಳಿವೆ. ಈ ಕುಟುಂಬಗಳು ಪ್ರಸ್ತುತ ರಾಜ್ಯ ಸರ್ಕಾರದಿಂದ ಉಚಿತ ಅಕ್ಕಿ ಮತ್ತು ಗೋಧಿಯನ್ನು ಪಡೆಯುತ್ತವೆ. ಕೇಂದ್ರವು ಸಬ್ಸಿಡಿ ದರದಲ್ಲಿ ಧಾನ್ಯಗಳನ್ನು ಒದಗಿಸುತ್ತದೆ.
ಒಂದು ವೇಳೆ ಕೇರಳ ಕೇವಲ 64,006 ಕಡು ಬಡ ಕುಟುಂಬಗಳನ್ನು ಹೊಂದಿದ್ದರೆ, ಅಂತ್ಯೋದಯ ಅನ್ನ ಯೋಜನೆಯಡಿ ( AAY) ಬರುವ ಬಡ ಕುಟುಂಬ ಇಲ್ಲವೇ? ಈ ಯೋಜನೆಯಡಿಯಲ್ಲಿ ಕೇಂದ್ರದ ನೆರವು ಕೂಡ ಕೊನೆಗೊಳ್ಳುತ್ತದೆಯೇ?" ಎಂದು ತಜ್ಞರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅತ್ಯಂತ ದುರ್ಬಲ ಕುಟುಂಬಗಳಿಗೆ ನೆರವು ನೀಡಲು 2002 ರಲ್ಲಿ ಪ್ರಾರಂಭಿಸಲಾದ ಆಶ್ರಯ ಯೋಜನೆಯಡಿಯಲ್ಲಿ ಈ ಹಿಂದೆ ಗುರುತಿಸಲಾದ ನಿರ್ಗತಿಕ ಕುಟುಂಬಗಳನ್ನು ಕಡು ಬಡವರು ಎಂದು ಉಲ್ಲೇಖಿಸಲಾಗಿದೆಯೇ ಎಂದು ಪ್ರಶ್ನಿಸಲಾಗಿದೆ.
ಆರಂಭದಲ್ಲಿ 1.18 ಲಕ್ಷ ಕುಟುಂಬಗಳನ್ನು ಗುರುತಿಸಿದ್ದು, ತದನಂತರ ನಂತರ 64,006 ಕ್ಕೆ ಇಳಿಸಿದ್ದು, ಪ್ರಸ್ತುತದ ಕಾರ್ಯಕ್ರಮ ಆಶ್ರಯ ಯೋಜನೆಯ ಮುಂದುವರಿಕೆಯೇ ಅಥವಾ ಹೊಸ ಆವೃತ್ತಿಯೇ ಎಂಬುದನ್ನು ಸ್ಪಷ್ಪಪಡಿಸಬೇಕು ಎಂದು ಪತ್ರದಲ್ಲಿ ತಜ್ಞರು ಒತ್ತಾಯಿಸಿದ್ದಾರೆ.
Advertisement