
ಚಂಡೀಗಢ: ಹಿಮಾಚಲ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಹಾನಿಯಿಂದಾಗಿ 3,056 ಕೋಟಿ ರೂಪಾಯಿಯಷ್ಟು ಆಸ್ತಿ ನಷ್ಟ ಉಂಟಾಗಿದ್ದು ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶವನ್ನು ವಿಪತ್ತು ಪೀಡಿತ ರಾಜ್ಯವೆಂದು ಘೋಷಿಸಿದ್ದಾರೆ.
ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳಿಂದ ಉಂಟಾದ ವಿನಾಶದ ಪ್ರಮಾಣವನ್ನು ಉಲ್ಲೇಖಿಸಿ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದು ರಸ್ತೆಗಳು, ಸೇತುವೆಗಳು, ವಿದ್ಯುತ್ ಸಂಪರ್ಕ ಮತ್ತು ನೀರು ಸರಬರಾಜು ಯೋಜನೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ವಿಪತ್ತಿಗೆ ಹವಾಮಾನ ಬದಲಾವಣೆಯನ್ನು ದೂಷಿಸಿದ ಅವರು, ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇಂದಿನಿಂದ ಇಡೀ ರಾಜ್ಯವನ್ನು ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದರು.
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭಾರೀ ಮಳೆ, ಭೂಕುಸಿತ ಮತ್ತು ಪ್ರವಾಹದಿಂದಾಗಿ ಮಣಿಮಹೇಶ್ ಯಾತ್ರೆಗೆ ಅಡ್ಡಿಯುಂಟಾಗಿದ್ದು, ಕನಿಷ್ಠ 16 ಭಕ್ತರು ಸಾವನ್ನಪ್ಪಿದ್ದಾರೆ. ಮುಂದಿನ 2 ದಿನಗಳವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ರಾಧಾ ಅಷ್ಟಮಿಯಂದು ಮಣಿ ಮಹೇಶ್ ದಾಲ್ ಸರೋವರದಲ್ಲಿ ಸಾಂಪ್ರದಾಯಿಕ ರಾಜ ಸ್ನಾನ ಸಾಧ್ಯವಾಗಲಿಲ್ಲ. ಭಾರೀ ಮಳೆ ಮತ್ತು ನಿರಂತರ ಭೂಕುಸಿತಗಳಿಂದಾಗಿ ಈ ಸಂಪ್ರದಾಯವನ್ನು 84 ದೇವಾಲಯ ಸಂಕೀರ್ಣಗಳಲ್ಲಿ ಪೂರ್ಣಗೊಳಿಸಲಾಯಿತು.
Advertisement