
ಜೈಪುರ: 2021ರ SI ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಲೋಕಸೇವಾ ಆಯೋಗ(ಆರ್‌ಪಿಎಸ್‌ಸಿ)ದ ಅಧ್ಯಕ್ಷರು ಮತ್ತು ಸದಸ್ಯರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ, ಆರ್‌ಪಿಎಸ್‌ಸಿ ಸದಸ್ಯೆ ಮಂಜು ಶರ್ಮಾ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಜು ಶರ್ಮಾ ಅವರು ಕವಿ ಮತ್ತು ಎಎಪಿ ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರ ಪತ್ನಿಯಾಗಿದ್ದು, ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಕ್ಟೋಬರ್ 2020ರಲ್ಲಿ ಆರ್‌ಪಿಎಸ್‌ಸಿ ಸದಸ್ಯೆಯಾಗಿ ನೇಮಕಗೊಂಡಿದ್ದರು ಮತ್ತು ಅವರು ಅಕ್ಟೋಬರ್ 2026ರವರೆಗೆ ಅಧಿಕಾರದಲ್ಲಿ ಮುಂದುವರಿಯಬೇಕಿತ್ತು.
ರಾಜ್ಯಪಾಲರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ಶರ್ಮಾ ಅವರು, ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಯಾವಾಗಲೂ ಪಾರದರ್ಶಕತೆ ಮತ್ತು ಸಮಗ್ರತೆಯಿಂದ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ.
ಯಾವುದೇ ಪೊಲೀಸ್ ಠಾಣೆ ಅಥವಾ ತನಿಖಾ ಸಂಸ್ಥೆಯಲ್ಲಿ ತಮ್ಮ ವಿರುದ್ಧ ಯಾವುದೇ ವಿಚಾರಣೆ ಬಾಕಿ ಇಲ್ಲದಿದ್ದರೂ ಮತ್ತು ತಮ್ಮನ್ನು ಎಂದಿಗೂ ಆರೋಪಿಯಾಗಿ ಹೆಸರಿಸಿಲ್ಲವಾದರೂ, ನೇಮಕಾತಿ ಪ್ರಕ್ರಿಯೆಯ ವಿವಾದವು ತಮ್ಮ ವೈಯಕ್ತಿಕ ಖ್ಯಾತಿ ಮತ್ತು ಆಯೋಗದ ಘನತೆಯ ಮೇಲೆ ಪರಿಣಾಮ ಬೀರಿದೆ ಎಂದು ಶರ್ಮಾ ಅವರು ತಿಳಿಸಿದ್ದಾರೆ.
ಮಂಜು ಶರ್ಮಾ ಅವರು ತಮ್ಮ ರಾಜೀನಾಮೆಗೆ ಸಂಬಂಧಿಸಿದಂತೆ ಆರ್‌ಪಿಎಸ್‌ಸಿಗೆ ಇಮೇಲ್ ಕಳುಹಿಸಿದ್ದಾರೆ ಎಂದು ಆರ್‌ಪಿಎಸ್‌ಸಿ ಮೂಲಗಳು ತಿಳಿಸಿವೆ.
ರಾಜಸ್ಥಾನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ-2021ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್, ತನ್ನ ಇತ್ತೀಚಿನ ಆದೇಶದಲ್ಲಿ ಸದಸ್ಯರ ಭಾಗವಹಿಸುವಿಕೆಯು RPSC ಯೊಳಗಿನ ವ್ಯವಸ್ಥಿತ ಭ್ರಷ್ಟಾಚಾರವನ್ನು ಸೂಚಿಸುತ್ತದೆ. ಇದು ಸಂದರ್ಶನ ಮತ್ತು ಲಿಖಿತ ಪರೀಕ್ಷೆಯ ಹಂತದಲ್ಲಿ ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ ಎಂದು ಹೇಳಿತ್ತು.
Advertisement