
ಕೋಲ್ಕತ್ತಾ: ಬಾಲಿವುಡ್ ಖ್ಯಾತ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಭಾಗವಹಿಸಿದ್ದಬೇಕಿದ್ದ ಉರ್ದು ಅಕಾಡೆಮಿ ಕಾರ್ಯಕ್ರಮ ರದ್ದುಗೊಂಡಿದೆ. ಸೆಪ್ಟೆಂಬರ್ 1 ರಿಂದ ಕೋಲ್ಕತ್ತಾದ ಉರ್ದು ಅಕಾಡೆಮಿಯಲ್ಲಿ ಹಿಂದಿ ಸಿನಿಮಾಗಳಲ್ಲಿ ಉರ್ದು ಎಂಬ ನಾಲ್ಕು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಜಾವೇದ್ ಅಖ್ತರ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ದಿಢೀರನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಇದಕ್ಕೆ ಕಾರಣವನ್ನು ತಿಳಿಸಿಲ್ಲ. ಕಾರಣಾಂತರಗಳಿಂದ ನಾಲ್ಕು ದಿನಗಳ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಶೀಘ್ರದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದು ಅಕಾಡೆಮಿಯ ಕಾರ್ಯದರ್ಶಿ ನುಝತ್ ಝೈನಾಬ್ ಮಂಗಳವಾರ ಪಿಟಿಐಗೆ ತಿಳಿಸಿದರು. ಆದಾಗ್ಯೂ, ಮುಂದೂಡಲಾದ ಕಾರ್ಯಕ್ರಮದಲ್ಲಿ ಅಖ್ತರ್ ಭಾಗವಹಿಸಲಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಜಾವೇದ್ ಅಖ್ತರ್ ಅವರ ಇತ್ತೀಚಿನ ಕೆಲವು ಹೇಳಿಕೆಗಳು ಮುಸ್ಲಿಮರ ಒಂದು ವರ್ಗದ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಜಮಯತ್ ಎ-ಉಲೇಮಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮುಫ್ತಿ ಅಬ್ದುಸ್ ಸಲಾಮ್ ಖಾಸ್ಮಿ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಈ ಹಿಂದೆ ಸಾಹಿತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಾವೇದ್ ಅಖ್ತರ್, ಎಲ್ಲಾ ಧರ್ಮಗಳಲ್ಲಿನ ಮತಾಂಧತೆ ವಿರುದ್ಧ ಧ್ವನಿ ಎತ್ತಿದ್ದರು. ಮತ್ತೆ ಈ ಕುರಿತು ಮಾತನಾಡಿದ್ದರು.
ಕೆಲ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಎಡ ಪಂಥೀಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
Advertisement