
ನವದೆಹಲಿ: ಬಿಹಾರದಲ್ಲಿ ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಇಂಡಿಯಾ ಬಣದ ಪ್ರಚಾರದ ವೇದಿಕೆಯಲ್ಲಿ ನನ್ನ ಮೃತ ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಇದು ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯನ್ನು ಅವಮಾನಿಸಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಮಹಿಳಾ ಉದ್ಯಮಿಗಳಿಗೆ ಸುಲಭವಾಗಿ ಆರ್ಥಿಕ ನೆರವು ಒದಗಿಸುವ ರಾಜ್ಯ ಜೀವಿಕಾ ನಿಧಿ ಸಹಕಾರಿ ಸಂಘ ಲಿಮಿಟೆಡ್ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಆರ್‌ಜೆಡಿ-ಕಾಂಗ್ರೆಸ್ ಪ್ರಚಾರ ವೇದಿಕೆಯಲ್ಲಿ ನನ್ನ ತಾಯಿಗೆ ಅವಾಚ್ಯ ಶಬ್ದ ಬಳಸಿ ನಿಂದಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗೆ ನನ್ನ ತಾಯಿಯನ್ನು ಮಾತ್ರ ಅವಮಾನಿಸಿಲ್ಲ, ಭಾರತದ ಪ್ರತಿಯೊಬ್ಬ ತಾಯಿ ಮತ್ತು ಅಕ್ಕ- ತಂಗಿಯರನ್ನು ಅವಮಾನಿಸಿದ್ದಾರೆ. ಇದನ್ನು ಕೇಳಿದ ನಂತರ ನೀವು ಕೂಡಾ ನನ್ನಷ್ಟೇ ನೋವು ಅನುಭವಿಸಿದ್ದೀರಿ ಎಂದು ನನಗೆ ತಿಳಿದಿದೆ ಎಂದರು.
ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಸುಮಾರು 20 ಲಕ್ಷ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತನ್ನ ದಿವಂಗತ ತಾಯಿ ಹೀರಾಬೆನ್ ಮೋದಿ ಬಡತನದ ವಿರುದ್ಧ ತನ್ನನ್ನು ಮತ್ತು ತನ್ನ ಒಡಹುಟ್ಟಿದವರನ್ನು ಸಾಕಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಅನಾರೋಗ್ಯ ಇದ್ದರೂ ಕೆಲಸ ಮಾಡಿ, ಪ್ರತಿಯೊಂದು ಪೈಸೆಯನ್ನು ಕೂಡಿಟ್ಟು ನಮಗೆ ಬಟ್ಟೆ ಕೊಡಿಸುತ್ತಿದ್ದರು. ನಮ್ಮ ದೇಶದಲ್ಲಿ ಅಂತಹ ಕೋಟಿ ಕೋಟಿ ತಾಯಂದಿರಿದ್ದಾರೆ. ದೇವರು ಮತ್ತು ದೇವತೆಗಳಿಗಿಂತ ತಾಯಿಯ ಸ್ಥಾನವು ಉನ್ನತವಾಗಿದೆ ಎಂದು ಅವರು ಹೇಳಿದರು.
ರಾಯಲ್ ಕುಟುಂಬದಲ್ಲಿ ಹುಟ್ಟಿದ ರಾಜರಿಗೆ ದುರ್ಬಲ ತಾಯಿಯ ನೋವು ಮತ್ತು ಆಕೆಯ ಮಕ್ಕಳ ಸಂಕಷ್ಟ ಅರ್ಥವಾಗುವುದಿಲ್ಲ. ಅವರೆಲ್ಲ ಚಿನ್ನ, ಬೆಳ್ಳಿ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದ್ದಾರೆ. ಬಿಹಾರದಲ್ಲಿ ತಮ್ಮ ಕುಟುಂಬವೇ ಅಧಿಕಾರದಲ್ಲಿ ಇರಬೇಕು ಅಂದುಕೊಂಡಿದ್ದಾರೆ. ಆದರೆ ದುರ್ಬಲ ಮಹಿಳೆಯೊಬ್ಬರ ಮಗನನ್ನು ಪ್ರಧಾನಿಯನ್ನಾಗಿ ಮಾಡಿದ್ದೀರಿ. ಇದನ್ನು ನಮ್ದಾರಿಗಳು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳುವ ಮೂಲಕ ತೀವ್ರ ಟೀಕಾ ಪ್ರಹಾರ ನಡೆಸಿದರು.
ನನ್ನ ವಿರುದ್ಧ ನೀಚ್, ವಿಷ ಸರ್ಪ ಮತ್ತಿತರ ಪದಗಳಿಂದ ನಿಂದಿಸಿರುವ ಪ್ರತಿಪಕ್ಷದವರು ಇದೀಗ 'ಥೂ' ಎಂಬ ಪದ ಬಳಸಿ ಟೀಕಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement