
ಪಾಟ್ನಾ: ಬಿಹಾರದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ 'ಮತದಾರರ ಅಧಿಕಾರ ಯಾತ್ರೆ'ಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಶ್ಲೀಲ ನಿಂದನಾತ್ಮಕ, ಅವಹೇಳನಕಾರಿ ಪದ ಪ್ರಯೋಗ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಹೌದು.. ಬಿಹಾರದಲ್ಲಿ ರಾಹುಲ್ ಗಾಂಧಿಯವರ (Rahul Gandhi) ಮತಯಾತ್ರೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ದಗಳಿನಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ಬಿಹಾರದ ದರ್ಭಾಂಗದಲ್ಲಿ ನಡೆದ Voter Adhikar Yatra ವೇದಿಕೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಮತ್ತು ತೇಜಸ್ವಿ ಯಾದವ್ ಅವರ ಪೋಸ್ಟರ್‌ಗಳನ್ನು ಹೊಂದಿದ್ದ ವೇದಿಕೆಯ ಮೇಲೆ ಕಾರ್ಯಕರ್ತರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸುತ್ತಿರುವುದನ್ನು ವೀಡಿಯೊದಲ್ಲಿ ದಾಖಲಾಗಿದೆ.
ವೇದಿಕೆಯಲ್ಲಿ ನಾಯಕರಿರಲಿಲ್ಲ...
ಇನ್ನು ಈ ಘಟನೆ ನಡೆದ ಸಂದರ್ಭದಲ್ಲಿ ವೇದಿಕೆ ಮೇಲೆ ಯಾವುದೇ ಗಣ್ಯ ನಾಯಕರು ಇರಲಿಲ್ಲ ಎಂದು ಹೇಳಲಾಗಿದೆ. ಈ ವರ್ಷದ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ಸ್ಥಳೀಯ ಕಾಂಗ್ರೆಸ್ ನಾಯಕ ನೌಶಾದ್ ಅವರ ಹೆಸರನ್ನು ಕಾರ್ಯಕರ್ತರು ಹೇಳಿರುವುದು ಕೇಳಿಸುತ್ತದೆ. ನೌಶಾದ್ ಈ ಮಾತನ್ನು ತಿರಸ್ಕರಿಸಿದ್ದು, ಮುಜಫರ್ಪುರದಲ್ಲಿ ನಡೆಯಲಿರುವ ಮೆರವಣಿಗೆಗೆ ರಾಹುಲ್ ಗಾಂಧಿ ಅವರೊಂದಿಗೆ 15-20 ನಿಮಿಷಗಳ ಹಿಂದೆಯೇ ಹೊರಟಿದ್ದಾಗಿ ಹೇಳಿಕೊಂಡಿದ್ದಾರೆ.
ನಾನು ದೆಹಲಿಯಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. 20 ವರ್ಷಗಳಿಂದ ನಾನು ಪಕ್ಷದ ಕಾರ್ಯಕರ್ತನಾಗಿದ್ದೇನೆ. ನಾವು ಅಂತಹ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಆದರೂ, ನಾನು ಕ್ಷಮೆಯಾಚಿಸುತ್ತೇನೆ. ನಾವು ಕಾರ್ಯಕ್ರಮವನ್ನು ಆಯೋಜಿಸಿದ್ದರಿಂದ, ನಾನು ಕ್ಷಮೆಯಾಚಿಸುತ್ತಿದ್ದೇನೆ. ಈ ರೀತಿ ಯಾರೇ ಹೇಳಿದ್ದರೂ ಅದು ತಪ್ಪು ಎಂದು ಅವರು ಹೇಳಿದ್ದಾರೆ.
ಅಂತರ ಕಾಯ್ದುಕೊಂಡ ಕಾಂಗ್ರೆಸ್
ಇನ್ನು ಈ ವಿಚಾರವಾಗಿ ಕಾಂಗ್ರೆಸ್ ಈ ಘಟನೆಯಿಂದ ಅಂತರ ಕಾಯ್ದುಕೊಂಡಿದ್ದು, ನಾಯಕ ರಶೀದ್ ಅಲ್ವಿ ಅವರು ಪಕ್ಷವು ಅಂತಹ ಭಾಷೆಯನ್ನು ಅನುಮೋದಿಸುವುದಿಲ್ಲ ಮತ್ತು ಕೃತ್ಯವನ್ನು ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು, ಪ್ರಧಾನಿ ಮೋದಿ ವಿರುದ್ಧ ಬಳಸಿದ ಭಾಷೆಯನ್ನು "ಸಂಪೂರ್ಣವಾಗಿ ಅಸಹನೀಯ" ಎಂದು ಕರೆದಿದೆ ಮತ್ತು ರಾಹುಲ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಬಡವನ ಮಗ, ಒಬಿಸಿ ಸಮುದಾಯದ ಮಗ ಪ್ರಧಾನಿಯಾಗಿದ್ದಾನೆ - ಮತ್ತು ನೀವು ಇದನ್ನು ಸಹಿಸಲು ಸಾಧ್ಯವಿಲ್ಲ. ಅಂತಹ ಅಸೂಯೆಯಿಂದ ಉರಿಯುವುದರಿಂದ, ನೀವು ನಿಮ್ಮನ್ನು ನಾಶಪಡಿಸಿಕೊಳ್ಳುತ್ತೀರಿ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ.
ಬಿಜೆಪಿ ಕೆಂಡಾಮಂಡಲ, ಕ್ಷಮೆ ಯಾಚನೆಗೆ ಒತ್ತಾಯ
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಸಂಸದರು ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಈ ಸಂಬಂಧ ಬಿಜೆಪಿ ಪಕ್ಷದ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. 'ರಾಹುಲ್ ಗಾಂಧಿ ಹಾಗೂ ತೇಜಸ್ವಿ ಯಾದವ್ ಅವರ ಅರಿವಿನೊಂದಿಗೆ ಇವೆಲ್ಲವೂ ನಡೆಯುತ್ತಿದೆ. ಇಷ್ಟು ಕೀಳುಮಟ್ಟದ ರಾಜಕೀಯ ಹಿಂದೆಂದೂ ಕಂಡಿರಲಿಲ್ಲ. ಈ ಯಾತ್ರೆಯಲ್ಲಿ ದ್ವೇಷ ರಾಜಕೀಯ ಎಲ್ಲ ಮಿತಿಗಳನ್ನು ಮೀರಿದೆ' ಎಂದು ಹೇಳಿದೆ.
ಅಂತೆಯೇ 'ಬಿಹಾರವನ್ನು ಅವಮಾನಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಅವರನ್ನು ಆಹ್ವಾನಿಸುವ ಮೂಲಕ ಬಿಹಾರದ ಜನತೆಗೆ ಅವಮಾನ ಎಸಗಲಾಗಿದೆ. ಇವೆಲ್ಲವನ್ನು ಬಿಹಾರದ ಜನತೆ ಎಂದಿಗೂ ಮರೆಯುವುದಿಲ್ಲ. ಸಾವಿರ ಬಾರಿ ಕ್ಷಮೆಯಾಚಿಸಿದರೂ ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಬಿಜೆಪಿ ಹೇಳಿದೆ.
Advertisement