ಅತ್ಯಾಚಾರ ಪ್ರಕರಣ: ಬಂಧಿಸಿ ಕರೆದೊಯ್ಯುತ್ತಿದ್ದಾಗ ಪೊಲೀಸರ ಮೇಲೆ ಗುಂಡು ಹಾರಿಸಿ ಎಎಪಿ ಶಾಸಕ ಪರಾರಿ!

ಪ್ರವಾಹದ ಕುರಿತು ತಮ್ಮದೇ ಪಕ್ಷದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ, ಅದರ ಕೇಂದ್ರ ನಾಯಕತ್ವವನ್ನು ಪ್ರಶ್ನಿಸಿದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ವಿರುದ್ಧ ಅತ್ಯಾಚಾರ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Harmeet Pathanmajra
ಹರ್ಮೀತ್ ಸಿಂಗ್ ಪಠಾಣಮಜ್ರಾ
Updated on

ಪಟಿಯಾಲ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ಪಂಜಾಬ್ ಎಎಪಿ ಶಾಸಕರೊಬ್ಬರು ಪೊಲೀಸರ ಮೇಲೆ ಗುಂಡು ಹಾರಿಸಿ, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ. ಸ್ಕಾರ್ಪಿಯೋ ಮತ್ತು ಫಾರ್ಚೂನರ್ ವಾಹನಗಳಲ್ಲಿ ಪರಾರಿಯಾಗಿರುವ ಶಾಸಕ ಮತ್ತು ಅವರ ಸಹಚರರನ್ನು ಪೊಲೀಸರು ಈಗ ಬೆನ್ನಟ್ಟುತ್ತಿದ್ದಾರೆ.

ಸನೂರ್‌ನ ಎಎಪಿ ಶಾಸಕ ಹರ್ಮೀತ್ ಪಠಾಣಮಜ್ರಾ ಅವರನ್ನು ಇಂದು ಬೆಳಿಗ್ಗೆ ಕರ್ನಾಲ್‌ನಲ್ಲಿ ಬಂಧಿಸಲಾಯಿತು. ಅವರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಪಠಾಣಮಜ್ರಾ ಮತ್ತು ಅವರ ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಒಬ್ಬ ಪೊಲೀಸ್ ಅವರನ್ನು ತಡೆಯಲು ಪ್ರಯತ್ನಿಸಿದರೂ, ಅವರು ಅವರಿಂದ ತಪ್ಪಿಸಿಕೊಂಡು ಎರಡು ಎಸ್‌ಯುವಿಗಳಲ್ಲಿ ಪರಾರಿಯಾಗಿದ್ದಾರೆ.

ನಂತರ, ಪೊಲೀಸರು ಫಾರ್ಚೂನರ್ ವಾಹನವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆರೋಪಿ ಶಾಸಕರು ಇನ್ನೊಂದು ವಾಹನದಲ್ಲಿದ್ದರು. ಇದೀಗ ಹಲವಾರು ಪೊಲೀಸ್ ತಂಡಗಳು ಅವರನ್ನು ಬೆನ್ನಟ್ಟುತ್ತಿವೆ.

ಏನಿದು ಪ್ರಕರಣ?

ಪ್ರವಾಹದ ಕುರಿತು ತಮ್ಮದೇ ಪಕ್ಷದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ, ಅದರ ಕೇಂದ್ರ ನಾಯಕತ್ವವನ್ನು ಪ್ರಶ್ನಿಸಿದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ವಿರುದ್ಧ ಅತ್ಯಾಚಾರ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಫ್‌ಐಆರ್ ಪ್ರಕಾರ, ಪಠಾಣಮಜ್ರಾ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಹೊರಿಸಲಾಗಿದೆ.

ಶಾಸಕ ತನ್ನನ್ನು ವಿಚ್ಛೇದಿತ ಎಂದು ತಪ್ಪಾಗಿ ಬಿಂಬಿಸಿಕೊಂಡು ತನ್ನೊಂದಿಗೆ ಸಂಬಂಧ ಬೆಳೆಸಿದ್ದಾರೆ ಮತ್ತು ನಂತರ 2021ರಲ್ಲಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಜಿರಾಕ್‌ಪುರ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಅವರು ತನ್ನ ಮೇಲೆ ನಿರಂತರ ಲೈಂಗಿಕ ಶೋಷಣೆ ಎಸಗಿ ಬೆದರಿಕೆಯೊಡ್ಡಿದ್ದಾರೆ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಫ್‌ಐಆರ್ ನಂತರ, ಪಠಣಮಜ್ರಾ ಫೇಸ್‌ಬುಕ್‌ ಲೈವ್‌ನಲ್ಲಿ, ಪಂಜಾಬ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು ಮತ್ತು ದೆಹಲಿ ಮೂಲದ ಎಎಪಿ ನಾಯಕತ್ವವು "ಪಂಜಾಬ್ ಅನ್ನು ಅಕ್ರಮವಾಗಿ ಆಳುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ, ಕೇಂದ್ರ ನಾಯಕತ್ವವು ರಾಜ್ಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಆದರೆ, ಎಎಪಿ ನಾಯಕರು ಮೂಗು ತೂರಿಸುತ್ತಿದ್ದಾರೆ. ಹೀಗಾಗಿ, ಪಕ್ಷದ ಇತರೆ ಶಾಸಕರು ತಮ್ಮೊಂದಿಗೆ ನಿಲ್ಲುವಂತೆ ಮನವಿ ಮಾಡಿದರು. ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಂಜಾಬ್ ಪೊಲೀಸ್ ಅಧಿಕಾರಿಗಳು ತಮ್ಮನ್ನು ಬಂಧಿಸಲು ಬಂದಿದ್ದಾರೆ ಎಂದು ಹೇಳಿಕೊಂಡರು.

ಅವರು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಬಹುದು, ನಾನು ಜೈಲಿನಲ್ಲಿಯೇ ಇರಬಹುದು, ಆದರೆ ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪಠಾಣಮಜ್ರ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com