
ಅಹಮದಾಬಾದ್: ಗುಜರಾತ್‌ನ ಬನಸ್ಕಂತ ಪೊಲೀಸರ ಸ್ಥಳೀಯ ಅಪರಾಧ ವಿಭಾಗ(LCB) ಬುಧವಾರ ತಡರಾತ್ರಿ ದೀಸಾ ತಾಲೂಕಿನಲ್ಲಿ ನಡೆಸಿದ ದಾಳಿಯಲ್ಲಿ ಪ್ರಮುಖ ನಕಲಿ ಕರೆನ್ಸಿ ದಂಧೆಯನ್ನು ಭೇದಿಸಿದ್ದಾರೆ.
ಮಹಾದೇವೀಯ ಗ್ರಾಮದಲ್ಲಿ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, LCB ತಂಡ ದಾಳಿ ನಡೆಸಿ ರಹಸ್ಯ ಕಾರ್ಖಾನೆಯನ್ನು ಪತ್ತೆಹಚ್ಚಿದೆ.
ಸ್ಥಳದಲ್ಲೇ ಇಬ್ಬರನ್ನು ಬಂಧಿಸಲಾಗಿದ್ದು, 40 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ನಕಲಿ ನೋಟುಗಳನ್ನು, ಮುದ್ರಣ ಉಪಕರಣಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ. ನಕಲಿ ಕರೆನ್ಸಿಗಳನ್ನು ಮಾರುಕಟ್ಟೆಗೆ ತುಂಬುತ್ತಿರುವ ನಕಲಿ ದಂಧೆಕೋರರ ಅಪಾಯಕಾರಿ ಜಾಲವನ್ನು ಈ ದಾಳಿ ಬಹಿರಂಗಪಡಿಸಿದೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ LCB ನಿನ್ನೆ ತಡರಾತ್ರಿ ನಕಲಿ ಕರೆನ್ಸಿ ಮುದ್ರಿಸಲಾಗುತ್ತಿದೆ ಎನ್ನಲಾದ ಮನೆಯ ಮೇಲೆ ದಾಳಿ ನಡೆಸಿತು. ದಾಳಿಯ ಸಮಯದಲ್ಲಿ ಇಬ್ಬರು ಆರೋಪಿಗಳಾದ ಸಂಜಯ್ ಸೋನಿ ಮತ್ತು ಕೌಶಿಕ್ ಶ್ರೀಮಾಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಆದಾಗ್ಯೂ, ಮಾಸ್ಟರ್ ಮೈಂಡ್ ರೇಮಲ್ ಸಿಂಗ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ ಎಂದು ಬನಸ್ಕಾಂತ ಎಸ್ಪಿ ಪ್ರಶಾಂತ್ ಸುಂಬೆ ಅವರು ತಿಳಿಸಿದ್ದಾರೆ.
ರೇಮಲ್ ಮತ್ತು ಸಂಜಯ್ ಇಬ್ಬರೂ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ. ರೇಮಲ್ ಈ ಹಿಂದೆ 16 ಸುಲಿಗೆ, ವಂಚನೆ ಮತ್ತು ಇತರ ಗಂಭೀರ ಅಪರಾಧಗಳ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ರೇಮಲ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಈಗ ತಪ್ಪಿಸಿಕೊಳ್ಳುವುದು ಇನ್ನಷ್ಟು ಆತಂಕಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
Advertisement